ಹೆಬ್ರಿ: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭಾಷೆಯ ಮೂಲ ಪದಗಳನ್ನು ನಾವು ಬಳಸದೆ ಅದೆಷ್ಟೋ ಪದಗಳು ನಮ್ಮಿಂದ ಮರೆಯಾಗಿವೆ. ನಮ್ಮ ಹಿರಿಯರು ನಮಗೆ ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸಿ ನಮ್ಮ ಪೀಳಿಗೆಗೆ ದಾಟಿಸಿದ್ದಾರೆ. ಇಂತಹ ಕನ್ನಡ ಭಾಷೆಯನ್ನು ನಾವು ಮುಂದಿನ ಪೀಳಿಗೆಗೆ ರವಾನಿಸುವ ಗುರುತರವಾದ ಹೊಣೆ ನಮ್ಮದಾಗಲಿ ಎಂದು ಹಿರಿಯ ಸಾಹಿತಿಗಳು ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಡಾ.ಪಾದೇಕಲ್ಲು ವಿಷ್ಣುಭಟ್ ಅವರು ಹೇಳಿದರು.
ಇವರು ಎಸ್. ಆರ್ ಪದವಿ ಪೂರ್ವ ಕಾಲೇಜಿನಲ್ಲಿ 2025 – 2026ನೇ ಶೈಕ್ಷಣಿಕ ವರ್ಷದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯೊಬ್ಬ ಅನೇಕ ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿದೆ. ಎಷ್ಟೇ ಭಾಷೆಗಳನ್ನು ಕಲಿತರು ಮಾತೃಭಾಷೆಯನ್ನು ಮರೆಯಬಾರದು. ವ್ಯಾವಹಾರಿಕ ಭಾಷೆಯಾದ ಇಂಗ್ಲಿಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬದಲು ತಾಯಿ ಭಾಷೆಯಾದ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಮಾತೃಭಾಷೆಯಲ್ಲಿ ಕಲಿತು ಅನೇಕ ಸಾಧನೆ ಮಾಡಿದ ಮಹನೀಯರು ನಮ್ಮೊಂದಿಗಿದ್ದಾರೆ. ಶಿಕ್ಷಣದಲ್ಲಿ, ಕಚೇರಿಗಳಲ್ಲಿ ಕನ್ನಡದ ಬಳಕೆ ಇರಬೇಕು. ಕನ್ನಡ ಭಾಷೆಯನ್ನಾಡುವಾಗ ಮಧ್ಯದಲ್ಲಿ ಇಂಗ್ಲಿಷ್ ಪದಗಳನ್ನು ಬಳಕೆ ಮಾಡಿ ಭಾಷೆಯ ಅರ್ಥವನ್ನು ಕೆಡಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿಯವರು ಮಾತನಾಡಿ, ಕನ್ನಡ ಭಾಷೆಯ ಹಿರಿಯ ಸಾಹಿತಿಗಳ ಕೃತಿಗಳು, ಅನೇಕ ಮೌಲ್ಯಯುತವಾದ ಬರೆಹಗಳು ನಮ್ಮ ಬದುಕಿನಲ್ಲಿ ಮಾರ್ಗದರ್ಶನವನ್ನು ನೀಡುತ್ತದೆ. ದಿನನಿತ್ಯ ನಾವು ಮಾತನಾಡುವಾಗ ಕನ್ನಡ ಪದಗಳನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಸಂಘದ ವತಿಯಿಂದ ಸಾಹಿತ್ಯ ಕೃತಿಗಳನ್ನು ಅಭ್ಯಾಸ ಮಾಡುವಂತಾಗಲಿ. ಇನ್ನು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್ ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿಂದಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪೂರ್ಣಾಂಕವನ್ನು ಪಡೆದ ಏಳು ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ದೀಪಕ್ ಎನ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಗತಿ ಉದ್ಘಾಟಕರನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿ, ಶಿವಾಜಿ ವಂದಿಸಿದರು.












