ಉಡುಪಿ: ಜಿಲ್ಲೆಯಲ್ಲಿ ಶೀಘ್ರವೇ ಮರಳುಗಾರಿಕೆ ಆರಂಭಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವಿದೆ. ಜಿಲ್ಲೆಯಲ್ಲಿ ಶಾಸಕರು, ಸಂಸದರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಬಿಜೆಪಿ ಪಕ್ಷದವರಿದ್ದಾರೆ. ಆದರೂ ಈವರೆಗೆ ಮರಳಿನ ಸಮಸ್ಯೆಯನ್ನು ಪರಿಹಾರ ಮಾಡಲು ಆಗದಿರುವುದು ವಿಪರ್ಯಾಸವೇ ಸರಿ ಎಂದರು.
ಮರಳಿನ ಸಮಸ್ಯೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಬಂದರೇ ವಿನಃ ಮರಳಿನ ಸಮಸ್ಯೆ ಮಾತ್ರ ಬಗೆಹರಿಸಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮರಳಿನ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಈ ನಡುವೆಯೂ ಕೆಲ ಜನಪ್ರತಿನಿಧಿಗಳಿಗೆ ಹಣ ಮಾಡುವ ಉದ್ದೇಶವೇ ಪ್ರಮುಖವಾಗಿದ್ದು, ಸಾಮಾನ್ಯ ಜನರಿಗೆ ಮರಳು ಕೊಟ್ಟು ಉದ್ಯೋಗ ಸೃಷ್ಟಿಸುವ ಯೋಚನೆ ಇಲ್ಲದಾಗಿದೆ. ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಪರಿಜ್ಞಾನವೂ ಇಲ್ಲದಂತಾಗಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ, ಮುಖಂಡರಾದ ಸುರೇಶ್ ಕಲ್ಲಾಗರ, ಶೇಖರ್ ಬಂಗೇರ, ದಾಸಭಂಡಾರಿ, ರಾಜೀವ ಪಡುಕೋಣೆ, ವಿಠಲ ಪೂಜಾರಿ, ದಯಾನಂದ ಕೋಟ್ಯಾನ್, ಜಗದೀಶ್ ಆಚಾರ್, ಸುಭಾಷ್ ನಾಯಕ್, ಗಣೇಶ್ ನಾಯಕ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.