ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೂ ಮಹತ್ವದ ಹುದ್ದೆಗಳಲ್ಲಿ ಅವಕಾಶ ನೀಡಿ ಸಮಾನತೆ ಎತ್ತಿ ಹಿಡಿಯುವ ಸಂಪ್ರದಾಯ ಮುಂದುವರಿದಿದೆ. ಭಾರತೀಯ ನೌಕಾಪಡೆ ಈ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದೆ. ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಫೈಟರ್ ಪೈಲಟ್ ತರಬೇತಿ ಪಡೆದ ನೇವಿಯ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಇದರೊಂದಿಗೆ ನೇವಿಯಲ್ಲಿ ಯುದ್ಧ ವಿಮಾನ ನಡೆಸುವ ಮಹಿಳಾ ಫೈಟರ್ ಪೈಲಟ್ಗಳ ಹೊಸ ಯುಗಕ್ಕೆ ನಾಂದಿ ಹಾಡಿದಂತಾಗಿದೆ. ಲೆಫ್ಟಿನೆಂಟ್ ಅತುಲ್ ಕುಮಾರ್ ಧುಲ್ ಮತ್ತು ಸಬ್ ಲೆಫ್ಟಿನೆಂಟ್ (ಎಸ್ಎಲ್ಟಿ) ಆಸ್ಥಾ ಪೂನಿಯಾ, ಎಸಿಎನ್ಎಸ್ (ವಾಯುಪಡೆ) ರೀರ್ ಅಡ್ಮಿರಲ್ ಜನಕ್ ಬೆವ್ಲಿ ಅವರಿಂದ ಪ್ರತಿಷ್ಠಿತ ‘ವಿಂಗ್ಸ್ ಆಫ್ ಗೋಲ್ಡ್’ ಪಡೆದಿದ್ದಾರೆ ಎಂದು ಎಕ್ಸ್ ಪೋಸ್ಟ್ನಲ್ಲಿ ಭಾರತೀಯ ನೌಕಾಪಡೆ ಪ್ರಕಟಿಸಿದೆ. ಆಸ್ಥಾ ಪೂನಿಯಾ ನೌಕಾಪಡೆಯ ವೈಮಾನಿಕ ವಿಭಾಗದ ಫೈಟರ್ ಸ್ಟ್ರೀಮ್ ಸೇರ್ಪಡೆಯಾದ ಮೊದಲ ಮಹಿಳೆಯಾಗಿದ್ದಾರೆ.












