ಉಡುಪಿ ಮೀನು ಮಾರುಕಟ್ಟೆಗೆ ಅಧಿಕಾರಿಗಳೊಂದಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ, ಪರಿಶೀಲನೆ

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿರುವ ಉಡುಪಿ ಹೈಟೆಕ್ ಮೀನು ಮಾರುಕಟ್ಟೆಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಾಗೂ ಅಧಿಕಾರಿಗಳೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೀನು ಮಾರಾಟಗಾರ ಮಹಿಳೆಯರು ಮೀನು ಮಾರುಕಟ್ಟೆಗೆ ನಗರಸಭೆ ವತಿಯಿಂದ ಕುಡಿಯುವ ನೀರಿನ ಸಂಪರ್ಕ, ಬಾವಿಗೆ ಆವರಣ ಗೋಡೆ ನಿರ್ಮಾಣ, ಮೀನುಗಾರ ಮಹಿಳೆಯರ ಅನುಕೂಲಕ್ಕಾಗಿ ಡ್ರೆಸ್ಸಿಂಗ್ ರೂಮ್, ವಿಶ್ರಾಂತಿ ಕೊಠಡಿ, ಸೋಲಾರ್ ವಿದ್ಯುತ್ ವ್ಯವಸ್ಥೆ, ಭದ್ರತೆಯ ದೃಷ್ಟಿಯಿಂದ ಸಿ ಸಿ ಟಿ ವಿ ಅಳವಡಿಕೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.

ಮೀನುಗಾರ ಮಹಿಳೆಯರ ಮನವಿಗೆ ಸ್ಪಂದಿಸಿದ ಶಾಸಕ ಯಶ್ ಪಾಲ್ ಸುವರ್ಣ ಅಗತ್ಯ ಬೇಡಿಕೆಗಳನ್ನು ಶೀಘ್ರವಾಗಿ ಉಡುಪಿ ನಗರಸಭೆ ವತಿಯಿಂದ ನಡೆಸಲು ಕ್ರಮ ವಹಿಸಿ, ತಕ್ಷಣ ಕಾಮಗಾರಿಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿ ನಗರದ ಕೇಂದ್ರ ಭಾಗದಲ್ಲಿರುವ ಮೀನು ಮಾರುಕಟ್ಟೆಯ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ ನಗರಸಭೆ ಮೂಲಕ ಮಹಿಳಾ ಮೀನು ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಹಸಿ ಮೀನು ಮಾರಾಟಗಾರ ಸಂಘದ ಅಧ್ಯಕ್ಷರಾದ ಬೇಬಿ ಎಚ್. ಸಾಲ್ಯಾನ್, ನಗರಸಭಾ ಸದಸ್ಯರಾದ ಮಾನಸ ಸಿ. ಪೈ, ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ, ಅಧಿಕಾರಿಗಳಾದ ರವಿ ಪ್ರಕಾಶ್, ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.