ಉಡುಪಿ: ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಸೋಮವಾರ, ಅಜ್ಜರಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಉಡುಪಿ ನಗರಕ್ಕೆ ಸ್ವಚ್ಛತೆಯಲ್ಲಿ ಹಲವಾರು ಪ್ರಶಸ್ತಿಗಳು ಬಂದಿರುವಲ್ಲಿ ಪೌರಾಡಳಿತ ಹಾಗೂ ಪೌರಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ರಘುಪತಿ ಭಟ್ ಹೇಳಿದರು.
ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿದ ಶಾಸಕರು, ಮುಂದಿನ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದಾಗಿ ತಿಳಿಸಿ, ನಗರ ಸ್ವಚ್ಛತೆಯಿರಿಸುವಲ್ಲಿ ಶ್ರದ್ಧೆಯಿಂದ ಶ್ರಮವಹಿಸಿ ಕೆಲಸಮಾಡಿ ಇನ್ನಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಶಾಸಕರು ಹೇಳಿದರು.
ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಸ್ವಚ್ಛತಾ ಸೇವೆ ಅಭಿಯಾನಕ್ಕೆ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ನೀಡುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಉದ್ಯಮಿ ಮನೋಹರ್ ಶೆಟ್ಟಿ, ಕೆಎಂಸಿ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸಿನ್ನ ಶ್ಯಾಮ್ ಸುಂದರ್, ಕಾರ್ಯಪಾಲ ಅಭಿಯಂತರ ಗಣೇಶ್, ಪರಿಸರ ಅಭಿಯಂತರ ರಾಘವೇಂದ್ರ ಉಪಸ್ಥಿತರಿದ್ದರು. ನಗರ ಸಭೆಯ ಆರೋಗ್ಯ ನಿರೀಕ್ಷಕ ಕರುಣಾಕರ ಪ್ರಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.