ಉಡುಪಿ ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಜತ ಸಂಭ್ರಮದ ಲಾಂಛನ ಅನಾವರಣ

ಉಡುಪಿ: ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ರಜತ ಸಂಭ್ರಮದ ಲಾಂಛನ ಅನಾವರಣ ಕಾರ್ಯಕ್ರಮ ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಲಾಂಛನ ಅನಾವರಣಗೊಳಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು, ಜನರ ವಿಶ್ವಾಸ, ನಂಬಿಕೆ ಗಳಿಸುವಲ್ಲಿ ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯಶಸ್ವಿಯಾಗಿದೆ.

ಈಗಾಗಲೇ ಸೊಸೈಟಿ ನಗರದ ಹೃದಯ ಭಾಗದಲ್ಲಿ ಜಾಗವನ್ನು ಖರೀದಿಸಿದ್ದು, ಅಲ್ಲಿ ನಿತ್ಯಾನಂದ ಸಾಗರ ಸೌಧ ಎಂಬ ಸುಸ್ಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಸಹಕಾರಿ ಕ್ಷೇತ್ರದಲ್ಲಿ ಎಷ್ಟು ವ್ಯವಹಾರ ಮಾಡಿದ್ದೇವೆ. ಎಷ್ಟು ಲಾಭ ಗಳಿಸಿದ್ದೇವೆ ಎಂಬುವುದು ಮುಖ್ಯವಲ್ಲ. ಗಳಿಸಿದ ಲಾಭದಲ್ಲಿ ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುವುದು ಮುಖ್ಯ ಎಂದರು.

ಸಹಕಾರಿ ಕ್ಷೇತ್ರದಿಂದ ಮಾತ್ರ ಉತ್ತಮ ಜಗತ್ತು ನಿರ್ಮಾಣ ಮಾಡಲು ಸಾಧ್ಯ‌. ಈ ಬಾರಿ ಸಹಕಾರಿ ಯೂನಿಯನ್ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಈಗಾಗಲೇ 41 ಸಾವಿರ ಗಿಡಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ವಿ.ಕೆ. ಗ್ರೂಪ್ಸ್ ನ ಸಿಎಂಡಿ ಕರುಣಾಕರ್ ಎಂ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಿ ಜನರಿಗೆ ಉತ್ತಮ ಸೇವೆ ನೀಡಲಿ ಎಂದು ಶುಭಹಾರೈಸಿದರು‌. ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು‌.

ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ, ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಟ್ರಸ್ಟಿ ದಿವಾಕರ ಶೆಟ್ಟಿ ತೋಟದಮನೆ, ರಜತ ಸಂಭ್ರಮ ಸಮಿತಿಯ ಸಂಚಾಲಕ ತೋನ್ಸೆ ಮನೋಹರ ಶೆಟ್ಟಿ, ಸಹ ಸಂಚಾಲಕ ಮೋಹನ್ ಶೆಟ್ಟಿ ಮೂಡನಿಡಂಬೂರು, ಸೊಸೈಟಿಯ ಉಪಾಧ್ಯಕ್ಷ ಎಂ. ಕೃಷ್ಣ ಆಳ್ವ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.