ಉಡುಪಿ: ಜುಲೈ 4ರಿಂದ ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳ

ಉಡುಪಿ: ಸಾಂಪ್ರದಾಯಿಕ ಉತ್ಪನ್ನ ಉತ್ತೇಜನ ಸಮಿತಿ, ಉಡುಪಿ ಇದರ ಆಶ್ರಯದಲ್ಲಿ ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳವನ್ನು ಇದೇ ಜುಲೈ 4ರಿಂದ 6ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ರತ್ನಾಕರ್ ಇಂದ್ರಾಳಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಪತ್ರೊಡೆ, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು ಸಹಿತ ಇತರೆ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ‌ ಎಂದರು.

ಜುಲೈ 4ರಂದು ಮಧ್ಯಾಹ್ನ 3ಗಂಟೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್ ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾವೀರ್ ಜೈನ್, ದಿವಾಕರ್ ಶೆಟ್ಟಿ, ಅಶೋಕ್ ಶೆಟ್ಟಿಗಾರ್, ನಿತ್ಯಾನಂದ ನಾಯಕ್ ಇದ್ದರು.