ಕುಂದಾಪುರ: ಕಳೆದ ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೆಮ್ಮಾಡಿ ಸಮೀಪದ ಕಟ್ಬೇಲ್ತೂರು ಮಹಿಳೆ ಇಂದು ತಮ್ಮ ಮನೆ ಬಾವಿಯಲ್ಲೇ ಶವವಾಗಿ ಪತ್ತೆಯಾದ ಕಳವಳಕಾರಿ ಘಟನೆ ವರದಿಯಾಗಿದೆ.
ಮರದ ಕೆತ್ತನೆ ಕೆಲಸ ನಿರ್ವಹಿಸುತ್ತಿರುವ ಕಟ್ಬೇಲ್ತೂರು ನಿವಾಸಿ ಮಂಜುನಾಥ ಆಚಾರ್ಯ ಅವರ ಪತ್ನಿ ಸುನಿತಾ ಆಚಾರ್ಯ(39) ಸಾವನ್ನಪ್ಪಿದ ಮಹಿಳೆ.
ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ರಸ್ತೆ ಸಮೀಪವಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಶುಕ್ರವಾರ ರಾತ್ರಿಯಿಂದಲೂ ಸುನಿತಾ ಪತ್ತೆಗಾಗಿ ಸ್ಥಳೀಯರು ವ್ಯಾಪಕ ಹುಡುಕಾಟ ಆರಂಭಿಸಿದ್ದರು. ಅಲ್ಲದೇ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಸುನಿತಾ ಮನೆ ಬಾವಿ ಸೇರಿದಂತೆ ಸಮೀಪದ ನದಿ, ರೈಲ್ವೆ ಹಳಿ, ಕೆರೆ-ಬಾವಿಗಳಲ್ಲೂ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು. ಆದರೂ ಸುನಿತಾ ಸುಳಿವು ಲಭ್ಯವಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಸುನಿತಾ ಶವ ಅವರ ಮನೆ ಬಾವಿಯಲ್ಲೇ ಪತ್ತೆಯಾಗಿದೆ.
ಇನ್ನು ಸುನಿತಾ ಸಾವಿನ ಹಿಂದೆ ಅನುಮಾನದ ಹುತ್ತ ಹುಟ್ಟಿಕೊಂಡಿದೆ. ಸುನಿತಾ ನಾಪತ್ತೆಯಾದ ಮರುದಿನ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇರಳದ ಮುಳುಗುತಜ್ಙ ಬೇಬಿ ಅವರನ್ನು ಕರೆಸಿ ಸಮೀಪದಲ್ಲಿರುವ ಬಾವಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಮುಳುಗುತಜ್ಙರು ಮೃತದೇಹ ಸಿಕ್ಕ ಸುನಿತಾ ಮನೆ ಬಾವಿಯಲ್ಲೂ ಮುಳುಗಿ ತಳದಲ್ಲಿರುವ ಮಣ್ಣನ್ನು ಮೇಲಕ್ಕೆ ತಂದಿದ್ದರು. ಬಾವಿ ಸುತ್ತ ಹುಡುಕಾಟ ನಡೆಸಿದರೂ ಸುನಿತಾ ಪತ್ತೆಯಾಗಿರಲಿಲ್ಲ. ಬಾವಿಯಲ್ಲಿ ಯಾವುದೇ ಕೊರೆತವೂ ಇರಲಿಲ್ಲ. ಇದೀಗ ಮೃತದೇಹ ಹೇಗೆ ಮೇಲಕ್ಕೆ ಬಂತು ಎಂದು ಸ್ಥಳದಲ್ಲಿದ್ದ ಮುಳುಗುತಜ್ಙ ಬೇಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸುನಿತಾ ಅವರಿಗೆ ವಿಪರೀತ ಬೆನ್ನುನೋವು ಹಾಗೂ ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಮಾತ್ರೆಗಳನ್ನು ತಿನ್ನುತ್ತಿದ್ದರು, ಹೀಗಾಗಿ ಖಿನ್ನತೆಗೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಪೊಲೀಸ್ ವಲಯದಿಂದ ಕೇಳಿಬಂದಿವೆ. ಪತಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವಾಸವಿದ್ದ ಸುನೀತಾ ಸ್ಥಳೀಯರಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದರು.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.