ಮಂಗಳೂರು: ಬಂಟ್ವಾಳ ತಾಲೂಕಿನ ಅಮ್ಮುಂಚೆ ಗ್ರಾಮದ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಹತ್ತಿರ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?:
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಹತ್ತಿರದ ಒಟ್ಟು 5.25 ಎಕರೆ ಸ್ಥಳದಲ್ಲಿ ಆಟದ ಮೈದಾನದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಹಿಂದೆ 10.00 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ ಈವರೆಗೆ ಮಂಜೂರಾದ ಅನುದಾನ ಬಿಡುಗಡೆಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳ ಆಟದ ಹಾಗೂ ಶಾರೀರಿಕ ತರಬೇತಿ ಚಟುವಟಿಕೆಗಳಿಗೆ ಇದರಿಂದ ತೀವ್ರ ಹಿನ್ನಡೆ ಉಂಟಾಗುತ್ತಿದೆ.


ಈ ಹಿನ್ನೆಲೆಯಲ್ಲಿ, ತಾತ್ವಿಕ ಅನುಮೋದನೆ ನೀಡಿದ 10.00 ಕೋಟಿ ರೂಪಾಯಿ ಅನುದಾನವನ್ನು ಆರ್ಥಿಕ ಇಲಾಖೆಯಿಂದ ತ್ವರಿತವಾಗಿ ಬಿಡುಗಡೆ ಮಾಡಿದ್ದಲ್ಲಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಆರಂಭಿಸಬಹುದಾಗಿದೆ. ಆದ್ದರಿಂದ ಬೆಂಜನಪದವು ಪ್ರದೇಶದ ಕ್ರೀಡಾ ಪಟು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಅನುದಾದ ಬಿಡುಗಡೆ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದವರು ಪತ್ರ ಬರೆದಿದ್ದಾರೆ.












