ದ್ವೈತಸಿದ್ಧಾಂತಿ ಪ್ರತಿಪಾದಕ ಆಚಾರ್ಯ ಮಧ್ವರ ಮಾತಿದು:
ಮಹಾಪ್ರಯತ್ನ –ವರ್ಜಿತಾಃಮಹಾನುಭಾವ –ವರ್ಜಿತಾಃ |
ಹರೇರನಗ್ರಹೋಜ್ಝಿತಾಃ ನರಾ ನ ಜಗ್ಮುರುನ್ನತಿಮ್ ||
ನಿರಂತರ ಪ್ರಯತ್ನಶೀಲತೆ, ಮಹತ್ತನ್ನು ಸಾಧಿಸುವ ಛಲತೊಟ್ಟ ಆತ್ಮಶಕ್ತಿ ಮತ್ತು ಭಗವಂತನ ಅನುಗ್ರಹ- ಈ ಮೂರರಲ್ಲಿ ಯಾವೊಂದು ಕೊರತೆಯಾದರೂ ಮನುಷ್ಯ ಎತ್ತರಕ್ಕೇರಲಾರ. ಉಡುಪಿಯ ಶ್ರೀ ಅದಮಾರು ಮಠದ 31 ನೆಯ ಯತಿವರ್ಯರಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರಲ್ಲಿ ಈ ಮೂರೂ ಮುಪ್ಪುರಿಗೊಂಡಿದೆ. ಸಾಮಾಜಿಕ ಜೀವನದ ಅವರ ಯಶಸ್ಸಿನ ಗುಟ್ಟು ಇದೇ ಆಗಿದೆ ಎನ್ನುತ್ತಾರೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು.
ಮಾಧ್ವವಾಙ್ಮಯದ ಉದ್ ಗ್ರಂಥ ‘ನ್ಯಾಯಸುಧಾ’ದ ಪಾಠ ನಡೆಯುತ್ತಿದ್ದಾಗ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಹಪಾಠಿಯಾಗಿದ್ದ ಬನ್ನಂಜೆ ಗೋವಿಂದಾಚಾರ್ಯರು “ಅದೊಂದು ನನ್ನ ಬಾಳಿನ ಅಪೂರ್ವ ಅನುಭವ” ಎನ್ನುತ್ತಾರೆ. ಅದಮಾರು ಶ್ರೀಪಾದರನ್ನು ಸುಮಾರು ಆರು ದಶಕಗಳ ಕಾಲ ಹತ್ತಿರದಿಂದ ಕಂಡವರು ಬನ್ನಂಜೆಯವರು. ೬೦ವರ್ಷಗಳಿಗೂ ಮಿಕ್ಕಿದ ಗಾಢವಾದ ಒಡನಾಟವಿರುವ ನಾಡಿನ ಹಿರಿಯ ವಿದ್ವಾಂಸರಾದ ಬನ್ನಂಜೆಯವರು ಶ್ರೀಪಾದರ ಬಗೆಗೆ ಬರೆಯ ಹೊರಟರೆ ಸಾವಿರ ಸಾವಿರ ನೆನಪುಗಳು. ಯಾವುದನ್ನು ಬರೆಯಲಿ ಯಾವುದನ್ನು ಬಿಡಲಿ ಎನ್ನುವ ಗೊಂದಲ ಎನ್ನುತ್ತಾರೆ. ಅಂಥ ನೆನಪುಗಳಲ್ಲಿ ನೆನಪಾಗಿದ್ದನ್ನು ಅವರು ಹರಿದ್ವಾರದಲ್ಲಿದ್ದಾಗ ಬರೆದು ನನಗೆ ಕಳಿಸಿದ್ದರು. ಅದೆಲ್ಲವೂ ಈಗ ನೆನಪು ಮಾತ್ರ. ಈಗ ಶ್ರೀಪಾದರೂ ಇಲ್ಲ, ಬನ್ನಂಜೆಯವರೂ ಇಲ್ಲ.
ದೊಡ್ಡವರ ಬದುಕನ್ನು ಹತ್ತಿರದಲ್ಲಿ ನೋಡುವುದು ಒಂದು ಕುತೂಹಲದ ಸಂಗತಿ. ಹತ್ತಿರದಲ್ಲಿ ಕಂಡಾಗ ವ್ಯಕ್ತಿತ್ವದ ಹಿರಿಮೆ ಎದ್ದು ಕಾಣುತ್ತದೆ. ದೌರ್ಬಲ್ಯ ಕೂಡಾ ಎಂಬುದು ಬನ್ನಂಜೆಯವರ ಅಭಿಪ್ರಾಯ. ಶ್ರೀಪಾದರ ಅದಮ್ಯ ಆತ್ಮಶಕ್ತಿಗೆ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳೇ ಕುಬ್ಜಗಳಾಗಿ ಕಾಣಿಸುತ್ತಿವೆ. ಅವರು ಬೆಳೆದಷ್ಟು ಎತ್ತರಕ್ಕೆ ಅವರ ಕಟ್ಟಡ ಸಂಸ್ಥೆಗಳು ಬೆಳೆಯಲಾರವು ಎನ್ನುವುದೇ ಅವರ ಸಮಸ್ಯೆ ಎಂದವರು ಬನ್ನಂಜೆಯವರು.
ಅಹುದು, ವಿಬುಧೇಶತೀರ್ಥರು ದೊಡ್ಡ ವಿದ್ವಾಂಸ; ದೊಡ್ಡ ಕನಸುಗಾರ; ಅಸಾಧಾರಣ ಕರ್ತೃತ್ವ ಶಕ್ತಿಯ ಧೀಮಂತ. ದಿಟ್ಟ ಆಡಳಿತಗಾರ. ಅಂಜದ ಮುಲಾಜಿಲ್ಲದ ಮಾತುಗಾರ ಎನ್ನುತ್ತಾರೆ ಬನ್ನಂಜೆಯವರು. ಅವರದು ಬಯಕೆ ತುಂಬಿದ ಬದುಕು. ಬಯಕೆಯಿಲ್ಲದವನಿಗೆ ಬದುಕೆ ಇಲ್ಲ ಎಂಬುದನ್ನು ಮನಗಂಡವರು ಅವರು. ಅದಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡರು. ಸಂಸ್ಕೃತದ ಕಲಿಕೆಕಾಗಿ ಉಡುಪಿಯ ಸಂಸ್ಕೃತ ಮಹಾಪಾಠಶಾಲೆಗೆ ಭವ್ಯ ಕಟ್ಟಡ ನಿರ್ಮಾಣ, ವೇದಾಧ್ಯಯನಕ್ಕಾಗಿ ವೇದಪಾಠ ಶಾಲೆ ಆರಂಭ, ಉಡುಪಿಯನ್ನು ಸಾಂಸ್ಕೃತಿಕವಾಗಿ ಎತ್ತರಕ್ಕೇರಿಸುವಲ್ಲಿ ಅವಿರತ ಶ್ರಮ, ಜೊತೆಗೆ ಇಂಗ್ಲಿಷ್ ಶಿಕ್ಷಣದ ಮಹತ್ವ, ಅಗತ್ಯ ಮತ್ತು ಅನಿವಾರ್ಯತೆಯನ್ನು ಐವತ್ತರ ದಶಕದಲ್ಲಿ ಕಂಡರಸಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ದೂರದೃಷ್ಟಿಯುಳ್ಳ ಬಹುದೊಡ್ಡ ದೂರಗಾಮಿ ಚಿಂತಕ. ಅವರ ದೂರದೃಷ್ಟಿಗೆ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳು ನಿದರ್ಶನ ಎನ್ನುತ್ತಾರೆ ಬನ್ನಂಜೆ. ಅವರು ದಾರಿ ನೋಡಿ ನಡೆದವರಲ್ಲ; ಅವರು ನಡೆದದ್ದೇ ದಾರಿಯಾಯಿತು ಎಂಬುದು ಬನ್ನಂಜೆಯವರ ಅಂಬೋಣ.
ಬೆಂಗಳೂರಿನ ಬಳಿಯ ಮಠದ ತೋಟವೊಂದರಲ್ಲಿ ಅವರು ಕಾಳುಬೇಳೆ, ಕಾಯಿಪಲ್ಲೆಯನ್ನು ಬೆಳೆಸಿದ್ದರು. ನಮ್ಮ ಆಹಾರವನ್ನು ನಾವೆ ಬೆಳೆಸಿಕೊಂಡರೆ ದೇಶಕ್ಕೆ ಅಷ್ಟು ಹೊರೆ ಕಮ್ಮಿಯಾಯಿತು ಎಂದರಂತೆ ಬನ್ನಂಜೆಯವರಲ್ಲಿ. ಪುಟ್ಟ ಪುಟ್ಟ ಸಂಗತಿಯಲ್ಲೂ ಅವರ ದೇಶೀಯ ಕಾಳಜಿಯನ್ನು ಬನ್ನಂಜೆಯವರು ಗುರುತಿಸುತ್ತಾರೆ.

ಶ್ರೀಪಾದರ ಚಟುವಟಿಕೆಗಳನ್ನು ಪ್ರಸಾರ ಮಾಡಬೇಕೆಂದು ಬಯಸಿ ಶ್ರೀಪಾದರ ಸಂದರ್ಶನಕ್ಕೆ ಅಂತ ಬಂದ ದೂರದರ್ಶನದವರಿಗೆ, ಶ್ರೀಪಾದರು, ‘ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಈ ದೇಶದ ಒಬ್ಬ ಹೊಣೆಗಾರ ನಾಗರಿಕನಾಗಿ ನನ್ನ ಕರ್ತವ್ಯವನ್ನಷ್ಟೇ ನಾನು ಮಾಡುತ್ತಿದ್ದೇನೆ. ನನಗೆ ನಿಮ್ಮ ಯಾವ ಪ್ರಚಾರವೂ ಬೇಕಿಲ್ಲ’ ಎಂದಿದ್ದರು. ಕೊನೆಗೆ ಬನ್ನಂಜೆಯವರ ಒತ್ತಾಯಕ್ಕೆ ಮಣಿದು ಅವರ ಹಂಬಲದಂತೆ ಬನ್ನಂಜೆಯವರೇ ಸಂದರ್ಶಕರಾದರು. ಶ್ರೀಪಾದರ ಈ ಸಂದರ್ಶನ ನಡೆದದ್ದು ಸದಾಶಿವನಗರದ ಪೂರ್ಣಪ್ರಜ್ಞ ಹೈಸ್ಕೂಲಿನಲ್ಲಿ.
ತಾನೇ ಕಟ್ಟಿ ಬೆಳೆಸಿದ ಹರಿಜನ ಕೇರಿಯ ಮಂದಿಯ ಯೋಗಕ್ಷೇಮ ವಿಚಾರಿಸಲು ಶ್ರೀಪಾದರು ಹೋಗಿದ್ದಾಗ ಒಬ್ಬ ಹುಡುಗ ಶಾಲೆ ತಪ್ಪಿಸಿ ತೋಟದಲ್ಲಿ ಆಟವಾಡ್ತಿದ್ದ. ಶ್ರೀಪಾದರು, ಯಾಕೆ ಮಗು ಶಾಲೆಗೆ ಹೋಗಿಲ್ಲ ಎಂದು ಕೇಳಿದರು. ಮನೆಯಲ್ಲಿ ಕೆಲಸ ಇತ್ತು, ಅಪ್ಪ ಹೋಗಬೇಡಾಂದ ಅಂತ ಹುಡುಗ ಹೇಳಿದ. ಆಗ ಶ್ರೀಪಾದರು, ‘ನೋಡು, ನಾಳೆ ನೀನು ದೊಡ್ಡವನಾಗ್ತೀಯ. ನಿನಗೊಬ್ಬ ಹೆಂಡತಿ ಬರ್ತಾಳೆ.ಅವಳು ತವರಿಂದ ಓಲೆ ಹಾಕ್ತಾಳೆ.ನೀನು ಶಾಲೆ ತಪ್ಪಿಸಿ ಹೀಗೆ ಓದು ಕಲಿಯದೆ ದಡ್ಡನಾಗಿರ್ತೀಯಾ? ಹೆಂಡತಿಯ ಓಲೆ ಓದಲಿಕ್ಕೆ ಬರೋಲ್ಲ! ಆಗೇನು ಮಾಡ್ತೀಯಾ? ಪಕ್ಕದ ಮನೆಗೆ ಹೋಗಿ ‘ನನ್ನ ಹೆಂಡ್ತಿ ಓಲೆ ಬರೆದವ್ಳೆ ಒಸಿ ಓದಿ ಹೇಳಿ’ ಅಂತೀಯಾ?ನಾಚಿಕೆಗೇಡು ಅಲ್ವಾ? ಅದರಿಂದ ನಿನ್ನ ಹೆಣ್ತಿ ಓಲೆ ಓದಲಿಕ್ಕಾದರೂ ನೀನು ಓದುಬರೆಹ ಕಲಿಯಬೇಕು. ಅಲ್ವಾ? ಅದರಿಂದ ಶಾಲೆ ತಪ್ಪಿಸಬಾರದಪ್ಪಾ. ನಾಳೆಯಿಂದ ತಪ್ಪದೆ ಶಾಲೆಗೆ ಹೋಗು, ಓದಿ ಜಾಣನಾಗು.’ ಮಕ್ಕಳ ಬಗೆಗೆ, ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಶ್ರೀಪಾದರಿಗಿರುವ ಕಾಳಜಿ ಅದ್ಭುತ; ಅನುಕರಣೀಯ ಎನ್ನುತ್ತಾರೆ ಬನ್ನಂಜೆ.
ಕಸಿಮಾವಿನ ಸಸಿ ತರಿಸಿ ಹರಿಜನ ಕೇರಿಯ ಮಂದಿಗೆಲ್ಲ ಹಂಚಿದರು. ಹಂಚಿ ಹೇಳಿದರಂತೆ: ಇದನ್ನು ನಿಮ್ಮ ತೋಟದಲ್ಲಿ ನೆಟ್ಟು ನೀರೆರೆದು ಬೆಳೆಸಿ, ಈ ದೇಶದ ಅತ್ಯಂತ ಶ್ರೀಮಂತರ ಮಕ್ಕಳು ತಿನ್ನುವ ಹಣ್ಣನ್ನು ನಿಮ್ಮ ಮಕ್ಕಳೂ ತಿನ್ನುವಂತಾಗಬೇಕು ಎನ್ನುವುದು ನನ್ನಾಸೆ.
ಒಮ್ಮೆ ಮಠದ ವಿದ್ವಾಂಸರೊಬ್ಬರ ಮಗನಿಗೆ ಮದ್ರಾಸಿನಲ್ಲಿ ಓದುವುದಕ್ಕೆ ಶ್ರೀಪಾದರು ಮಾಡಿದ ವ್ಯವಸ್ಥೆ ಆಗದೇ ಹೋದಾಗ ಆ ವಿದ್ವಾಂಸರು ಪುನಃ ಶ್ರೀಪಾದರಲ್ಲಿ ಬಂದು ನಿವೇದಿಸಿಕೊಂಡರು. ನಮ್ಮ ಹಣೆಬರೆಹ ಸರಿಯಿಲ್ಲ ಅಂತ ಚಿಂತೆಗೀಡಾದಾಗ ಶ್ರೀಪಾದರು ಆಡಿದ ಮಾತಿದು: ಚಿಂತಿಲ್ಲ, ನಿರಾಶಾಗಬೇಡಿ. ನಾವು ಪೂಜಿಸುವ ಕಾಳೀಯ ಮರ್ದನ ಕೃಷ್ಣನಿಗೆ ಬಡತನ ಬಂದಿಲ್ಲ. ನಿಮ್ಮ ಮಗನಿಗೆ ಮರಳಿ ಬರುವುದು ಬೇಡ ಎಂದು ತಿಳಿಸಿ. ಅವನು ಅಲ್ಲೇ ಕಾಲೇಜಿಗೆ ಸೇರಲಿ. ಅವನಿಗಿಷ್ಟವಾದ ವಿಷಯದ ಮೇಲೆ ಉಚ್ಚಶಿಕ್ಷಣ ಮುಂದುವರೆಸಲಿ. ಅವನ ಉಚ್ಚಶಿಕ್ಷಣ ಪೂರ್ತಿ ಮುಗಿಯುವ ತನಕದ ಯಾವತ್ತೂ ಖರ್ಚಿನ ಹೊಣೆ ನಮ್ಮ ಮಠದ್ದು.ಮಠದ ಸಂಪತ್ತು ಇರುವುದೇ ಜ್ಞಾನದಾಹಕ್ಕಾಗಿಯಲ್ಲವೇ? ಎಂದು ಧೈರ್ಯ ಹೇಳಿ ಸಹಾಯವನ್ನು ನೀಡಿದರು. ಶ್ರೀಪಾದರ ದಿಟ್ಟ ನಿಲುವು ಮತ್ತು ಜ್ಞಾನಪ್ರೇಮವನ್ನು ಕಂಡು ತಾನು ಮೂಕವಿಸ್ಮಿತನಾಗಿದ್ದೆ ಎನ್ನುತ್ತಾರೆ ಬನ್ನಂಜೆಯವರು.
ಮಠಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸುತ್ತಿದ್ದ ಪಂಡಿತರೊಬ್ಬರು ಶ್ರೀಪಾದರ ಬಳಿ ಬಂದು ಒಮ್ಮೆಲೇ ಪೇಜಾವರ ಶ್ರೀಗಳ ನಡೆಯನ್ನು ಖಂಡಿಸುತ್ತಲೇ ಮುಖಸ್ತುತಿ ಶ್ರೀಪಾದರ ಮುಖಸ್ತುತಿ ಮಾಡಲು ಆರಂಭಿಸುತ್ತಾರೆ. ಪೇಜಾವರ ಶ್ರೀಪಾದರ ಎದುರು ಆಡಿದ ಮಾತುಗಳನ್ನೇ ಅದಮಾರು ಶ್ರೀಪಾದರ ಎದುರು ಆಡಿದಾಗ ಬನ್ನಂಜೆಯವರಿಗೆ ಕುತೂಹಲ.ಯಾಕೆಂದರೆ, ಎರಡೂ ಸಂದರ್ಭಗಳಿಗೆ ಬನ್ನಂಜೆಯವರು ಸಾಕ್ಷಿಯಾಗಿದ್ದರು. ಪಂಡಿತರು ಹೋದಮೇಲೆ ಬಾಲ್ಯದ ಸಲುಗೆಯಿಂದ ಶ್ರೀಪಾದರನ್ನು ತರಾಟೆಗೆ ತೆಗೆದುಕೊಂಡ ಬನ್ನಂಜೆಯವರು ಮುಖಸ್ತುತಿ ಪಂಡಿತರಾಡಿದ ನಾಟಕವನ್ನು ಶ್ರೀಪಾದರಿಗೆ ವಿವರಿಸಿದರು. ಶ್ರೀಪಾದರನ್ನು ಹಂಗಿಸಿದರು; ಇಂಥ ಭಟ್ಟಂಗಿಗಳಿಗೆ ನಿಮ್ಮ ಮಠಗಳಲ್ಲಿ ಮೊದಲ ಮಣೆ, ಪುರಸ್ಕಾರ. ಏನಿದು? ಏಕೆ ಹೀಗೆ? ಎಂದು. ಬನ್ನಂಜೆಯವರ ಮಾತಿಗೆ ಶ್ರೀಪಾದರು, ‘ನನಗೆ ಗೊತ್ತಿಲ್ಲ ಎಂದು ತಿಳಿದಿರಾ ಅವರ ಈ ಇಬ್ಬಂತಿತನ ಗೊತ್ತು, ಇದು ಸ್ವಾರ್ಥದ ಸಮಯ ಸಾಧಕತೆ. ನಾನು ಅವರ ಹೊಗಳಿಕೆಗೆ ಉಬ್ಬಲಿಲ್ಲ. ಈ ಹೊಗಳಿಕೆಯ ಹಿಂದಿರುವ ಉದ್ದೇಶ ನನಗೆ ಗೊತ್ತು. ಆದರೆ ಏನು ಮಾಡಲಿ? ನಮ್ಮ ಸುತ್ತ ಇಂಥವರು ಸೇರಿಕೊಳ್ತಾರೆ. ನೀವೆ ಇಂದ್ರ, ನೀವೇ ಚಂದ್ರ ಎನ್ನುತ್ತಾರೆ. ಎಲ್ಲ ಸಹಿಸ್ಕೋಬೇಕು. ಪರಿಸ್ಥಿತಿ ಹೀಗಿದೆ: ನಮ್ಮನ್ನು ಬಿಟ್ಟು ಅವರಿಗೆ ಗತಿಯಿಲ್ಲ. ಅವರನ್ನು ಬಿಟ್ಟು ನಮಗೆ ಗತಿಯಿಲ್ಲ. ಈ ಮುಖವಾಡದ ಬದುಕಿಗೆ ನಾವು ನಮ್ಮನ್ನು ಬಲವಂತವಾಗಿ ಒಗ್ಗಿಸಿಕೊಂಡೇ ಬಾಳಬೇಕು. ಬೇರೆ ದಾರಿಯಿಲ್ಲ. ಇದೂ ಒಂದು ಬಗೆಯಲ್ಲಿ ಅಪ್ರಾಮಾಣಿಕತೆಯ ಜತೆಗೆ ಒಡಂಬಡಿಕೆ. ಇಂಥವರ ಜತೆಗೇ ನಾವು ಏಗಬೇಕಲ್ಲ!’
ಶ್ರೀಪಾದರ ಮಾತು ಕೇಳಿ ಬನ್ನಂಜೆಯವರು ದಂಗಾದರು. ದೊಡ್ಡದಾಗಿ ಬದುಕ ಬಹಿಸುವವರ ಸಮಸ್ಯೆಯಿದು. ಅವರಿಗೆ ಎಲ್ಲವೂ ತಿಳಿದಿರುತ್ತದೆ; ಆದರೆ ಏನೂ ತಿಳಿಯದವರಂತೆ ಇದ್ದು ಬಿಡಬೇಕು ಎಂಬಂಥ ಸ್ಥಿತಿ ಅವರದು ಎನ್ನುತ್ತಾರೆ ಬನ್ನಂಜೆ.
ಮಠದ ಆಡಳಿತಕ್ಕೆ ಸೇರಿದ ತೋಟವನ್ನು ನೋಡಿಕೊಳ್ಳಲು ಶ್ರೀಪಾದರು ಒಬ್ಬ ಮ್ಯಾನೇಜರನನ್ನು ನೇಮಿಸಿದರು. ಅವನು ಶ್ರೀಪಾದರ ಎದುರಿಗೆ ವಿನೀತ, ಪ್ರಾಮಾಣಿಕ, ಸ್ವಾಮಿನಿಷ್ಠನ ಹಾಗೆ ಇದ್ದ. ಆದರೆ ಹಿಂಬದಿಯಿಂದ ಕತ್ತಿ ಮಸೆಯುತ್ತಿದ್ದ. ಶ್ರೀಪಾದರು ಅವನನ್ನು ಪೂರ್ಣವಾಗಿ ನಂಬಿದರು ಅಥವಾ ನಂಬಿದಂತೆ ನಡೆದುಕೊಂಡರು. ಶ್ರೀಪಾದರ ನಂಬಿಕೆಯನ್ನು ಬಳಸಿಕೊಂಡು ಅವನು ಶ್ರೀಪಾದರಿಗೇ ಮೋಸ ಮಾಡಲು ಸಂಚು ಮಾಡಿದ. ತೋಟವನ್ನು ಕಬಳಿಸುವ ಪ್ರಯತ್ನಕ್ಕೆ ಮುಂದಾದ. ನನ್ನ ಅನುಭೋಗದಲ್ಲಿರುವ ಇಡಿಯ ತೋಟ ನನಗೇ ಸಲ್ಲಬೇಕಾದ್ದು ಎಂದು ಡಿಕ್ಲರೇಷನ್ ಕೊಟ್ಟ. ಲ್ಯಾಂಡ್ ತ್ರಿಬ್ಯೂನಲಿನಲ್ಲಿ ಮಠದ ವಿರುದ್ಧವಾಗಿ ವಾದ ಹೂಡಿದ.‘ಯಾಕೆ ವಿಶ್ವಾಸದ್ರೋಹದ ಕೆಲಸ ಮಾಡಿದೆ?’ ಎಂದು ಶ್ರೀಪಾದರು ಅವನನ್ನು ಕೇಳಿದರು.
‘ನನಗೊಬ್ಬ ಬಾಬಾ ಗುರುಗಳಿದ್ದಾರೆ. ಅವರ ಆಶೀರ್ವಾದದ ಜೊತೆಯಲ್ಲಿ ಬದುಕುವವನು. ಅವರ ನಿರ್ದೇಶನದಂತೆ ನಡೆಯುವವನು. ಈ ತೋಟದ ಬಗ್ಗೆ ಅವರ ಬಳಿ ಕೇಳಿದೆ. ಅವರು ಹೇಳಿದರು: ‘ಮಠಕ್ಕೆ ಯಾಕೆ ತೋಟ? ನೀನು ಡಿಕ್ಲರೇಷನ್ ಹಾಕು. ಅದು ನಿನ್ನದಾಗುತ್ತೆ. ಅವರ ಆದೇಶದಂತೆ ನಾನು ನಡೆದುಕೊಂಡೆ. ಇದು ಗುರುವಿನ ಆಜ್ಞಾಪಾಲನೆ. ವಿಶ್ವಾಸದ್ರೋಹವಲ್ಲ’ ಎಂದು ಶ್ರೀಪಾದರಿಗೆ ವಿಚಿತ್ರವಾದ ಉತ್ತರ ಕೊಟ್ಟ.ಶ್ರೀಪಾದರು ತತ್ ಕ್ಷಣ ಗುಡುಗಿದರು: ನಾನು ಪೂಜಿಸುವ ಕಾಳೀಯಮರ್ದನ ಕೃಷ್ಣ ದೊಡ್ಡವನೋ ನಿನ್ನ ಬಾಬಾಗುರು ದೊಡ್ಡವನೋ ತೀರ್ಮಾನವಾಗಲಿ. ನನ್ನ ಕೃಷ್ಣ ದೊಡ್ಡವನಾದರೆ ಮಠದ ಆಸ್ತಿ ಮಠಕ್ಕೇ ಉಳಿಯುತ್ತೆ. ಹೋಗು. ನಿನ್ನಿಂದ ನೀನುಂಡ ಮಠಕ್ಕೆ ವಿರುದ್ಧವಾಗಿ ಏನೆಲ್ಲ ಮಾಡುವುದು ಸಾಧ್ಯವೋ ಅದನ್ನು ಮಾಡು’.ಕೃಷ್ಣ ದೊಡ್ದವನು. ಎಲ್ಲರಿಗಿಂತ ದೊಡ್ಡವನು. ಶ್ರೀಮಠದ ತೋಟ ಮಠಕ್ಕೇ ಉಳಿಯಿತು. ಶ್ರೀಕೃಷ್ಣ ಶ್ರೀಪಾದರ ಮಾತಿಗೆ ತಥಾಸ್ತು ಅಂದುಬಿಟ್ಟ ಅಂತಾರೆ ಬನ್ನಂಜೆಯವರು.
ಗಾಳಿ ಬಂದತ್ತ ಕೊಡೆಹಿಡಿದು, ಪ್ರವಾಹ ಹರಿದತ್ತ ಕೈಯಾಡಿಸಿ, ದಡ ಸೇರಿದವರು ಯಾರೂ ಮಹಾಪುರುಷರಾಗಲಿಲ್ಲ. ಪ್ರವಾಹಕ್ಕೆ ಎದುರಾಗಿ ಈಜ ಹೊರಟವನು, ಈಜಿ ಗೆದ್ದವನು ಮಹಾಪುರುಷನಾಗುತ್ತಾನೆ. ಅದಮಾರು ಶ್ರೀಪಾದರು, ಪ್ರವಾಹಕ್ಕೆ ಎದುರಾಗಿ ಈಜಿ ಹೊರಟವರು. ಅದಕೆಂದೆ ಸಮಾಜ ಅವರನ್ನು ಆಸೆ ತುಂಬಿದ ಕಣ್ಣಿನಿಂದ ಕಾಣುತ್ತಿದೆ ಎನ್ನುತ್ತಾರೆ ಬನ್ನಂಜೆಯವರು.
ಶ್ರೀಪಾದರು ನನ್ನ ಮೇಲಿಟ್ಟ ಪ್ರೀತಿಯೂ ಅನನ್ಯವಾದುದು. ನಾಡಿನ ಜನತೆ ನನ್ನನ್ನು ಗುರುತಿಸುವ ಮೊದಲು ಅವರು ನನ್ನನ್ನು ಗುರುತಿಸಿದರು. ನನ್ನ ಶಾಸ್ತ್ರಾಧ್ಯಯನದ ಪರಿಶ್ರಮವನ್ನು ಕಂಡು ಎಕ್ಸ್ ಕ್ಲೂಸಿವ್ ಆದ ವಿದ್ಯಾವಾಚಸ್ಪತಿ ಎಂಬ ಬಿರುದನ್ನಿತ್ತು ಹರಸಿದರು. ಅವರ ಪ್ರೀತಿ, ವಿದ್ಯಾಪ್ರೇಮ ದೊಡ್ಡದು. ನನ್ನನ್ನು ಮೊದಲು ವಿದೇಶಕ್ಕೆ ಕಳಿಸಿದವರೂ ಅವರೇ. ಅವರ ಪ್ರೀತಿಯ ಒತ್ತಡ ಇಲ್ಲದಿದ್ದರೆ ನಾನೆಂದೂ ವಿದೇಶಕ್ಕೆ ತೆರಳುತ್ತಿರಲಿಲ್ಲ. ಅವರ ಋಣದ ಭಾರ ನನ್ನ ಮೇಲೆ ಬಹಳಷ್ಟಿದೆ. ಎಂದು ಬನ್ನಂಜೆಯವರು ಶ್ರೀಪಾದರ ವ್ಯಕ್ತಿತ್ವದ ವಿಲಕ್ಷಣತೆಯನ್ನು ಹೇಳುತ್ತಲೇ ಗೌರವಿಸುತ್ತಾರೆ; ಮೆಚ್ಚುತ್ತಾರೆ. ಮನುಷ್ಯ ಸಹಜವಾದ ತನ್ನೆಲ್ಲ ದೌರ್ಬಲ್ಯಗಳನ್ನು ಹಂತಹಂತವಾಗಿ ಮೀರಿ ಎತ್ತರಕ್ಕೇರಿನಿಂತ ಅವರ ಸಾಹಸದ ಗಾಥೆ ಮುಂದಿನ ತರುಣ ಜನಾಂಗಕ್ಕೆ ಆದರ್ಶವಾಗಲಿ.ದಾರಿದೀಪವಾಗಲಿ ಎಂದು ಬನ್ನಂಜೆಯವರು ಆಶಿಸುತ್ತಾರೆ.
ಅಹುದು, ತನ್ನ ಪುಟ್ಟ ತೋಳುಗಳಿಂದ ಇಡಿಯ ಮಾನವ ಜನಾಂಗವನ್ನೆ ತಬ್ಬಬೇಕು ಎಂದು ಕನಸು ಕಂಡವರು ಶ್ರೀಪಾದರು.ಅದಕ್ಕಾಗಿ ಬದುಕನ್ನು ಅರ್ಪಿಸಿಕೊಂಡರು. ಶಿಕ್ಷಣಕ್ಕಾಗಿ ಸರ್ಕಾರವೊಂದು ಮಾಡಬಹುದಾದ ಕೆಲಸವನ್ನು ಸೇವೆಯ ರೂಪದಲ್ಲಿ ಮಾಡಿ ಮಡಿದವರು ಶ್ರೀಪಾದರು.ಅವರ ನೆನಪು ಸಾಯುವುದಕ್ಕೇ ಸಾಧ್ಯವೇ ಇಲ್ಲ. ಪೂರ್ಣಪ್ರಜ್ಞ ಅಂದಾಕ್ಷಣ ನೆನಪಾಗುವುದೇ ಉಡುಪಿ ಅದಮಾರು ಶ್ರೀ ವಿಬುಧೇಶತೀರ್ಥ ಶ್ರೀಪಾದರು. ಹತ್ತು ಸಂಸ್ಥೆಗಳನ್ನು ಕಟ್ಟಿ ಹನ್ನೊಂದನೆಯ ಸಂಸ್ಥೆಗಾಗಿ ಅವರ ಅಸೀಮ ಉತ್ಸಾಹ ಕನಸು ಕಾಣುತ್ತದೆ. ಕಾಲದೇಶಗಳ ಎಲ್ಲೆಯನ್ನೂ ಮೀರಿ ಎಂಬ ಬನ್ನಂಜೆಯವರ ಮಾತು ಬೆಳಕಿನಷ್ಟು ಸತ್ಯ!
ಬನ್ನಂಜೆಯವರ ಮಾತಿದು: ಸಮಾಜವನ್ನು ಮರೆತು ಆತ್ಮನಿರ್ಭರಾಗಿ ಬದುಕುವ ಯತಿಗಳುಂಟು. ಯತಿಗಳನ್ನು ಮರೆತು ಬದುಕುವ ಸಮಾಜವೂ ಉಂಟು. ಇದು ಅದರ ಪ್ರತಿಫಲನ ಮಾತ್ರ. ಯತಿಗಳು ಸಮಾಜವನ್ನು ಮರೆತಾಗ ಸಮಾಜವೂ ಯತಿಗಳನ್ನು ಮರೆಯುತ್ತದೆ.

▪ ಟಿ.ದೇವಿದಾಸ್












