ಉಡುಪಿ: ಕೆಪಿಸಿಸಿ ನಿಯೋಗದಿಂದ ಮುಸ್ಲಿಮ್ ಮುಖಂಡರೊಂದಿಗೆ ಸಮಾಲೋಚನೆ

ಉಡುಪಿ: ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸೌಹಾರ್ದವನ್ನು ಸಮಾಜದಲ್ಲಿ ಮೂಡಿಸುವ ಉದ್ದೇಶದಿಂದ ಕೆಪಿಸಿಸಿಯಿಂದ ನಿಯೋಜನೆಗೊಂಡ ಹಿರಿಯ ಮುಖಂಡರನ್ನು ಒಳಗೊಂಡ ನಿಯೋಗ ಇಂದು ಉಡುಪಿ ಜಾಮೀಯ ಮಸೀದಿಗೆ ಭೇಟಿ ನೀಡಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿತು.

ರಾಜ್ಯಸಭಾ ಸದಸ್ಯ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಸಿರ್ ಹುಸೇನ್, ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಕಿಮ್ಮನೆ ರತ್ನಾಕರ್ ಅವರ ನಿಯೋಗ ಮುಸ್ಲಿಮ್ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಿಯೋಗಕ್ಕೆ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಎಂ.ಪಿ.ಮೊದಿನಬ್ಬ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಒಕ್ಕೂಟದ ಉಪಾಧ್ಯಕ್ಷ ಫರೀದ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್, ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಯಾಹ್ಯಾ ನಕ್ವಾ, ಅಝೀಝ್ ಉದ್ಯಾವರ, ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಕಾರ್ಯ ದರ್ಶಿ ಖಾಲೀದ್, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಶರ್ಫುದ್ದೀನ್ ಶೇಕ್, ಇಸ್ಮಾಯಿಲ್ ಆತ್ರಾಡಿ, ಹಬೀಬ್ ಅಲಿ ಮೊದಲಾದವರು ಉಪಸ್ಥಿತರಿದ್ದರು.