ಕೆಲವೇ ವರ್ಷಗಳಲ್ಲಿ ಪತ್ರಕರ್ತರ ಬಹುತೇಕ ಹುದ್ದೆಗಳನ್ನು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ನುಂಗಿ ಹಾಕಲಿದೆ- ರಾಜಾರಾಂ ತಲ್ಲೂರು ಆತಂಕ

ಉಡುಪಿ: ಕೃತಕ ಬುದ್ದಿಮತ್ತೆ ಸುದ್ದಿಮನೆಯ ಒಳಗೆ ಪ್ರವೇಶಿಸಿದರೆ, ಭಾಷಾಂತರ, ಸುದ್ದಿ, ಸಾರಾಂಶ, ವಿವಿಧ ಶೀರ್ಷಿಕೆ ಆಯ್ಕೆ, ಕಾಪಿ ಎಡಿಟಿಂಗ್, ವೀಡಿಯೊ ಭಾಷಣದ ಟ್ರಾನ್ಸ್ಸ್ಕ್ರಿಪ್ಟ್ ರಚನೆ, ಸಬ್-ಟೈಟಲ್ ಸೇರಿದಂತೆ ಬಹುತೇಕ ಕೆಲಸಗಳನ್ನು ಮಾಡಬಹುದು. ಇದರ ಪರಿಣಾಮ ಮುಂದಿನ ಕೆಲವೇ ವರ್ಷಗಳಲ್ಲಿ ಸುದ್ದಿ ಡೆಸ್ಕ್ನಲ್ಲಿರುವ ಮುಕ್ಕಾಲು ಪಾಲು ಮತ್ತು ವರದಿಗಾರಿಕೆ ಕ್ಷೇತ್ರದಲ್ಲಿರುವ ಶೇ.50 ಮಂದಿಯ ಕೆಲಸವನ್ನು ಈ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಆಧರಿತ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ನುಂಗಿ ಹಾಕಲಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ರಾಜಾರಾಂ ತಲ್ಲೂರು ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಉಡುಪಿ ಲಯನ್ಸ್ ಕ್ಲಬ್ ಸಹಯೋಗ ದೊಂದಿಗೆ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆಯಲ್ಲಿ ಅವರು ‘ಮಾಧ್ಯಮ: ಮುಂದಿನ 10ವರ್ಷಗಳ- ಮಿಡಿಯಾ ಕನ್ವರ್ಜೆನ್ಸ್, ಎಲ್ಎಲ್ಎಂ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಾರತ 2023ರಲ್ಲಿ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್(ಡಿಪಿಡಿಪಿ)-2023ನ್ನು ಅಂಗೀಕರಿಸಿದೆ. ಅದರ ಕರಡು ನಿಯಮಗಳನ್ನು ಈಗಾಗಲೇ ಸರಕಾರ ಪ್ರಕಟಿಸಿದ್ದು, ಅದನ್ನು ಸಾರ್ವಜನಿಕ ಚರ್ಚೆಗಾಗಿ ಇರಿಸಲಾಗಿದೆ. ಬಹಳ ಬೇಗ ಆ ನಿಯಮಗಳು ಜಾರಿಗೆ ಬರಲಿವೆ. ಇದು ಮಾಧ್ಯಮಗಳ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮಹತ್ವದ ಬೆಳವಣಿಗೆ ಆಗಬಹುದು ಎಂದರು.

ನಮ್ಮಲ್ಲಿ ಈವರೆಗೆ ಖಾಸಗಿತನ, ಬೌದ್ಧಿಕ ಹಕ್ಕು, ಕಾಪಿರೈಟ್ ಇತ್ಯಾದಿಗಳ ಕಾನೂನುಗಳೆಲ್ಲ ತೀರಾ ಸಡಿಲ ಆಗಿ ಇದ್ದವು. ಆದರೆ ಈಗ ಕೃತಕ ಬುದ್ದಿಮತ್ತೆ ಸನ್ನಿವೇಶದಲ್ಲಿ ಕಂಪ್ಯೂಟರ್ಗಳು ಎಲ್ಎಲ್ಎಂ(ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಬಳಸಿ ಕೌಶಲಗಳನ್ನು ಕಲಿಯುತ್ತಿವೆ. ಹೀಗೆ ಮುಂದುವರಿದು ನಮ್ಮ ಕೌಶಲವನ್ನು ಅವು ಬಳಸಿಕೊಂಡು, ತಾವು ಕಲಿತು ನಮ್ಮ ಉದ್ಯೋಗವನ್ನು ಕಿತ್ತುಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಅವರು ತಿಳಿಸಿದರು.

ಹೊಸ ಮಾಧ್ಯಮ ಟೆಕ್ನಾಲಜಿಗಳ ಮಹಾಪ್ರವಾಹದಲ್ಲಿ ಸುದ್ದಿ ತಲುಪುವ ವೇಗ ಹೆಚ್ಚಿರುವುದರಿಂದ ಪ್ರಸ್ತುತ ಆಗಿ ಉಳಿಯುವುದು ಮುದ್ರಣ ಮಾಧ್ಯಮದ ದೊಡ್ಡ ಸವಾಲು ಆಗಿದೆ. ಇಂದು ಜಗತ್ತಿನಾದ್ಯಂತ ಪ್ರತೀ ವರ್ಷ ನೂರಾರು ಮುದ್ರಣ ಪತ್ರಿಕೆಗಳು ಮುಚ್ಚಿಕೊಳ್ಳುತ್ತಿವೆ. ಇವತ್ತು ಮುದ್ರಣ ಮಾಧ್ಯಮ ಉಳಿದಿರುವುದಕ್ಕೆ ಕಾರಣ ಹಳೆಯ ತಲೆಮಾರಿನ ಓದುಗರು. ಅವರು ನೆಚ್ಚಿಕೊಂಡಿರುವುದರಿಂದ ಮುದ್ರಣ ಮಾಧ್ಯಮ ಸದ್ಯಕ್ಕೆ ಉಸಿರಾಡುತ್ತಿದೆ ಎಂದರು.

ಹಳೆಯ ಸ್ಯಾಟಲೈಟ್ ಆಧರಿತ ಟೆಲಿವಿಷನ್ ಚಾನೆಲ್ಗಳಿಗೆ ಹೊಸದಾಗಿ ಬರುತ್ತಿರುವ ಡಿಜಿಟಲ್-ವೆಬ್ ಆಧರಿತ ಚಾನೆಲ್ ಹಾಗೂ ತಂತ್ರಜ್ಞಾನದ ಜೊತೆ ಸ್ಪರ್ಧೆ ಕಷ್ಟ ಆಗುತ್ತಿದೆ. ಸದ್ಯಕ್ಕೆ ಅವರಿಗೆ ಮುದ್ರಣ ಮಾಧ್ಯಮದಷ್ಟು ಬಿಕ್ಕಟ್ಟು ಇಲ್ಲ, ಆದರೆ ಸಾಂಪ್ರದಾಯಿಕ ಟಿವಿ ಚಾನೆಲ್ ಆಗಿ ಉಳಿದುಕೊಳ್ಳುವುದು ದೀರ್ಘಾವಧಿಯಲ್ಲಿ ಕಷ್ಟ ಎಂದು ಅವರು ಹೇಳಿದರು.

ಇಂಟರ್ನೆಟ್ ಆಧರಿತ ಸುದ್ದಿ ಚಾನೆಲ್ಗಳು ಹೆಚ್ಚು ಖರ್ಚಿಲ್ಲ ಮತ್ತು ಸದ್ಯಕ್ಕೆ ಯಾವುದೇ ಕಾನೂನಾತ್ಮಕ ಅಡೆತಡೆಗಳಿಲ್ಲ ಎಂಬ ಕಾರಣಕ್ಕೆ ಹುಟ್ಟಿ ಕೊಳ್ಳುತ್ತಿವೆ. ಈ ವೆಬ್ ಚಾನೆಲ್ಗಳು ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರಂಗಳಲ್ಲಿ ಕ್ಲಿಕ್ಬೈಟ್ ಆಟದ ಮೊರೆ ಹೋಗಿವೆ. ಬಹುತೇಕ ವೆಬ್ ಮಾಧ್ಯಮಗಳ ಜುಟ್ಟು ಈಗ ಸಾಮಾಜಿಕ ಮಾಧ್ಯಮಗಳ ಕೈಯಲ್ಲಿದೆ ಎಂದು ಅವರು ತಿಳಿಸಿದರು.

ಒಂದು ಮಾಧ್ಯಮವು ಎಲ್ಲ ಬೇರೆ ಸಾಂಪ್ರದಾಯಿಕ ಮಾಧ್ಯಮಗಳ ಒಳ್ಳೆಯ ಅಂಶ(ರೇಡಿಯೋ ಧ್ವನಿ, ಟಿವಿ ದೃಶ್ಯಗಳು, ಮುದ್ರಣದ ಅಕ್ಷರಗಳು)ಗಳನ್ನೆಲ್ಲ ತಾನು ಗಳಿಸಿಕೊಂಡು, ಅವೆಲ್ಲ ಒಂದು ಕಡೆ ಸೇರಿ ಲಭ್ಯ ಆಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ನಮ್ಮ ಭವಿಷ್ಯದ ಮೀಡಿಯಾ ಹೀಗೆ ಇರುತ್ತದೆ. ಈ ಟ್ರೆಂಡ್ ಈಗಾಗಲೇ ಆರಂಭಗೊಂಡಿದೆ. ಸುದ್ದಿ ಇನ್ನು ಪಂಚೇಂದ್ರಿಯಗಳ ಒಟ್ಟು ಅನುಭವವಾಗಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್ ಮಾತನಾಡಿ, ಪತ್ರಿಕೋದ್ಯಮ ಸಮಾಜದ ಮೂರನೇ ಕಣ್ಣು. ಯಾವುದೇ ಒಂದು ವಿಷಯವನ್ನು ಅಳವಾಗಿ ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಬೇಕು. ಆಗ ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಬಹಳಷ್ಟು ಮಂದಿ ಪತ್ರಕರ್ತರು ಜೀವನದ ಹಂಗು ತೊರೆದು ಸೇವೆಯನ್ನು ಮಾಡುತ್ತಿದ್ದಾರೆ. ಪತ್ರಕರ್ತರು ತಮ್ಮ ವೃತ್ತಿಯ ಜೊತೆಗೆ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡಬೇಕು. ಪತ್ರಿಕೋದ್ಯಮ ಬಲಿಷ್ಠವಾಗಿದ್ದಷ್ಟು ಪ್ರಜಾತಂತ್ರ ವ್ಯವಸ್ಥೆ ಕೂಡ ಬಲಿಷ್ಠವಾಗಿರುತ್ತದೆ‌. ಸುತ್ತಮುತ್ತಲಿನ ಸಮಾಜವನ್ನು ಅರಿಯುವ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜದೊಂದಿಗೆ ಉತ್ತಮವಾಗಿ ಬೆರೆಯಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮಣಿಪಾಲ ಎಚ್ಪಿಆರ್ ಸಂಸ್ಥೆಗಳ ಮುಖ್ಯಸ್ಥ ಹರಿಪ್ರಸಾದ್ ರೈ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು. ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕುಂಜೂರು ಲಕ್ಷ್ಮೀನಾರಾಯಮ ಕುಂಡಂತಾಯ ಅವರಿಗೆ ಪ್ರತಿಕಾ ದಿನದ ಗೌರವವನ್ನು ಸಲ್ಲಿಸಲಾಯಿತು.

ವೇದಿಕೆಯಲ್ಲಿ ವಾರ್ತಾಧಿಕಾರಿ ಮಂಜುನಾಥ್, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳ ಪಟ್ಟಿಯನ್ನು ಸಮಿತಿ ಸದಸ್ಯ ಮೈಕಲ್ ರೋಡ್ರಿಗಸ್ ವಾಚಿಸಿದರು. ಕಾರ್ಯದರ್ಶಿ ರಹೀಂ ಉಜಿರೆ ಉಪನ್ಯಾಸಕರ ಪರಿಚಯ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತೆ ರಾಧಿಕಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು