ಎಲ್​ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ.

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ.ನಷ್ಟು ಕಡಿತ ಮಾಡಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.14 ಕೆಜಿ LPG ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಿಲಿಂಡರ್ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.

19 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ರೂ.58.50 ರಷ್ಟು ಕಡಿಮೆ ಮಾಡಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಸಿಲಿಂಡರ್ ದರ 1,665 ರೂಪಾಯಿಗೆ ತಲುಪಿದೆ. ಇಂದಿನಿಂದಲೇ ಪರಿಷ್ಕೃತ ಬೆಲೆ ಜಾರಿಯಲ್ಲಿ ಇರಲಿದೆ. ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1769 ರೂ.ಗಳಿಗೆ ಲಭ್ಯವಿರುತ್ತದೆ.

ಮೊದಲು ಇದು 1826 ರೂ.ಗಳಿಗೆ ಲಭ್ಯವಿತ್ತು, ಈಗ ಅದು 57 ರೂ.ಗಳಷ್ಟು ಅಗ್ಗವಾಗಿದೆ. ಈಗ ಮುಂಬೈನಲ್ಲಿ ಈ ಸಿಲಿಂಡರ್ ದರ 1616 ರೂ. ಆಗಿದೆ. ಜೂನ್ ನಲ್ಲಿ ಇದು 1674.50 ರೂ. ಇತ್ತು. ಇದಕ್ಕೂ ಮೊದಲು, ಅಂದರೆ ಮೇ ತಿಂಗಳಲ್ಲಿ ಇದು 1699 ರೂ.ಗೆ ಲಭ್ಯವಿತ್ತು. ಇಲ್ಲಿ, ಪ್ರತಿ ಸಿಲಿಂಡರ್ ಗೆ 58.50 ರೂ. ಕಡಿತ ಮಾಡಲಾಗಿದೆ. ಚೆನ್ನೈ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1823.50 ರೂ. ಆಗಿದೆ. ಜೂನ್ ನಲ್ಲಿ ಇದು 1881 ರೂ.ಗೆ ಲಭ್ಯವಿತ್ತು. ಜೂನ್ 2025, ಮೇ 2025, ಏಪ್ರಿಲ್ 2025 ರಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಸಹ ಕಡಿಮೆ ಮಾಡಲಾಗಿತ್ತು.