ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಎಂಬಲ್ಲಿ ದನದ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ಕಾರ್ಯ ಮುಂದುವರಿದಿದೆ.ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ್ ಮಾಹಿತಿ ನೀಡಿದರು.
ರಾಮ(49) ಕುಂಜಾಲು, ಪ್ರಸಾದ್(21) ಕುಂಜಾಲು, ನವೀನ್(35) ಮಟಪಾಡಿ, ಕೇಶವ ನಾಯ್ಕ್(50) ಸಂದೇಶ(35) ರಾಜೇಶ್ (28) ಕುಂಜಾಲು ಬಂಧಿತ ಆರೋಪಿಗಳು. ಇವರೆಲ್ಲರೂ ಕುಂಜಾಲು ಗ್ರಾಮದ ನಿವಾಸಿಗಳಾಗಿದ್ದಾರೆ. ಇವರು ದನವನ್ನು ಖರೀದಿಸಿ ಮಾಂಸ ಮಾಡಿ ಅದರ ಕಳೆಬರವನ್ನು ವಿಲೇವಾರಿ ಮಾಡಲು ಸ್ಕೂಟರಿನಲ್ಲಿ ಸಾಗಿಸುತ್ತಿದ್ದು, ಈ ವೇಳೆ ದಾರಿ ಮಧ್ಯೆ ದನದ ತಲೆ ಹಾಗೂ ಇತರ ಭಾಗಗಳು ರಸ್ತೆಗೆ ಬಿದ್ದಿದೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಹೊಂಡ ಆಕ್ಟಿವಾ ಹಾಗೂ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದರು.
















