ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ.!

ಚೆನ್ನೈ: ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್​ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ರಿಧನ್ಯಾ ವಿವಾಹವಾಗಿದ್ದರು. ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು.

ಕೀಟನಾಶಕ ಸೇವನೆ:
ಭಾನುವಾರ ರಿಧನ್ಯಾ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು, ದಾರಿಯಲ್ಲಿ ಆಕೆ ತನ್ನ ಕಾರನ್ನು ನಿಲ್ಲಿಸಿ ಕೀಟನಾಶಕ ಸೇವಿಸಿದ್ದಾರೆ. ಈ ಪ್ರದೇಶದಲ್ಲಿ ತುಂಬಾ ಹೊತ್ತಿನಿಂದ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ರಿಧನ್ಯಾಳ ಬಾಯಿಂದ ನೊರೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಪ್ರಾಣ ಬಿಟ್ಟಿದ್ದರು.

ಹಿಂಸೆ ತಾಳಲಾರದೆ ಆತ್ಮಹತ್ಯೆ:
ಮೂಲಗಳ ಪ್ರಕಾರಮ ರಿಧನ್ಯಾ ಸಾಯುವ ಮುನ್ನ ತಂದೆಗೆ ವಾಟ್ಸಾಪ್​ನಲ್ಲಿ 7 ಆಡಿಯೋ ಸಂದೇಶಗಳನ್ನು ಕಳುಹಿಸಿದ್ದಳು. ಅದರಲ್ಲಿ ತನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದಳು. ಗಂಡನ ಮನೆಯಲ್ಲಿ ಕೊಡುತ್ತಿದ್ದ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

ಮತ್ತೊಂದು ಸಂದೇಶದಲ್ಲಿ ಬೇರೊಬ್ಬನಿಗೆ ತನ್ನನ್ನು ಮದುವೆ ಮಾಡಿಕೊಡಲು ಅತ್ತೆಯ ಮನೆಯವರು ನಿರ್ಧರಿಸಿದ್ದಾರೆ, ಅವರು ಕೊಡುವ ಹಿಂಸೆ ತಡೆಯಲಾಗುತ್ತಿಲ್ಲ, ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದು ನೋವಿನಿಂದ ಮಾತನಾಡಿದ್ದಳು.