ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸಂಸ್ಮರಣೆಯ ಅಂಗವಾಗಿ ‘ಬಲಿದಾನ ದಿವಸ್’ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಮುಖಂಡರು ಶ್ಯಾಮಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಂಸ್ಕರಣ ಭಾಷಣ ಮಾಡಿ, ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಪ್ರೇರಣೆಯಾಗಿದೆ. ಅವರ ಜೀವನಾದರ್ಶನ, ತ್ಯಾಗ, ಬಲಿದಾನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ದೇಶದ ಏಕತೆಗಾಗಿ ಶ್ರಮಿಸಿದವರು ಮತ್ತು ಕಾಶ್ಮೀರದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದರು. ಅವರ ಬಗ್ಗೆ ಓದಿ ತಿಳಿದುಕೊಳ್ಳುವ ಕಾರ್ಯ ಆಗಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ವಿ.ಸುನಿಲ್ ಕುಮಾರ್, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಸಹಿತ ಬಿಜೆಪಿ ಜಿಲ್ಲಾ, ಮಂಡಲ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಶ್ರೀಕಾಂತ್ ನಾಯಕ್ ವಂದಿಸಿದರು.












