ಮೊಸರಲ್ಲಿ ಕಲ್ಲು ಹುಡುಕುವುದೇ ಬಿಜೆಪಿಗರ ಕೆಲಸ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ

ಉಡುಪಿ: ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ. 5 ರಷ್ಟು ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರಕಾರದಿಂದ ಆದೇಶ ಬಂದಿದೆ. ಅದನ್ನು ರಾಜ್ಯ ಸರಕಾರ ಪಾಲನೆ ಮಾಡಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಆದೇಶಕ್ಕೆ ಒಪ್ಪಿಗೆ ಕೊಟ್ಟಿದೆ. ಆದರೆ, ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಅವರಿಗೆ ರಾಜಕಾರಣ ಮಾಡಲು ಬೇರೆ ವಿಚಾರಗಳು ಉಳಿದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರಿಗೆ ವಸತಿ ಯೋಜನೆಯಡಿ ಶೇ. 5 ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗರು ಮೊದಲು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ರು, ಗ್ಯಾರಂಟಿ ಯೋಜನೆ ಅನುಷ್ಠಾನ ಆಗಲ್ಲ ಅಂತಾ ಹೇಳಿದ್ರು. ಕಾಂಗ್ರೆಸ್ 136 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದರೂ ಈ ಸರಕಾರ ಆರು ತಿಂಗಳು ಉಳಿಯಲ್ಲ ಅಂತಾ ಹೇಳಿದ್ರು. ಜನರ ಭಾವನೆಗಳ ಜೊತೆ ಆಟ ಆಡುವ ಬಿಜೆಪಿಗರಿಗೆ ಬೇರೆ ಮಾತನಾಡಲು ಏನೂ ಉಳಿದಿಲ್ಲ. ಜನರ ದಿಕ್ಕು ತಪ್ಪಿಸಲು ಈ ರೀತಿಯ ಉಚ್ಚಾಟಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಜೊತೆ ಮಾತನಾಡಿರುವ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಬಿ.ಆರ್. ಪಾಟೀಲ್ ನಮ್ಮ ಹಿರಿಯ ಶಾಸಕರು. ಅವರು ಏನೂ ಮಾತನಾಡಿದ್ದಾರೆ ಎಂಬುವುದು‌ ನನ್ನ ಗಮನಕ್ಕೆ ಬಂದಿಲ್ಲ‌. ಅವರ ಜೊತೆ ಮಾತನಾಡಿ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ:
ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಲಕ್ಷಣ ಇದೆ.‌ ಹೀಗಾಗಿ ಮಳೆ ಅವಾಂತರ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಯಾವುದೇ ಪ್ರಮಾಣದಲ್ಲಿ ಮಳೆ ಬಂದರೂ ನಾವು ಸಿದ್ಧವಾಗಿದ್ದೇವೆ ಎಂದು ಸಚಿವರು ಹೇಳಿದರು.