ಉಡುಪಿ: ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಜೂ.17ರಂದು ಖಾಸಗಿ ಬಸ್ಸನ್ನು ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಆರೋಪದಲ್ಲಿ ಚಾಲಕನನ್ನು ಪೊಲೀಸರು ಬಸ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ದೇವರಾಜ್ ಬಂಧಿತ ಬಸ್ ಚಾಲಕ. ಈತ ಶ್ರೀ ದುರ್ಗಾಂಬ ಖಾಸಗಿ ಬಸ್ನ್ನು ಕರಾವಳಿ ಬೈಪಾಸ್ ಕಡೆಯಿಂದ ಉಡುಪಿ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಮಧ್ಯೆ ತಿರುಗಿ ನಿಂತಿತು. ಬಳಿಕ ಆರೋಪಿ ಚಾಲಕ ಬಸ್ಸನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುವುದಾಗಿ ದೂರಲಾಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ ಎಂದು ತಿಳಿದುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದರಂತೆ ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಚಾಲಕ ದೇವರಾಜ್ನನ್ನು ಬಂಧಿಸಿ, ಬಸ್ಸನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.












