ಕುಚ್ಚೂರು- ಹೆಬ್ರಿ ರಸ್ತೆ ಸಂಪರ್ಕ ಕಡಿತ; ಇಲಾಖಾಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಉಡುಪಿ: ಹೆಬ್ರಿ -ಕುಚ್ಚೂರು ಸಂಪರ್ಕಿಸುವ ಬದಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಇದಕ್ಕೆ ಇಲಾಖಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಹೆಬ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಬ್ರಿ -ಕುಚ್ಚೂರು ಸಂಪರ್ಕಿಸುವ ಬದಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಇದಕ್ಕೆ ಅಧಿಕಾರಿಗಳ ಬೇಜಾಬ್ದಾರಿಯೇ ಕಾರಣ ಎಂದು ಸ್ಥಳೀಯರು‌ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮಾತನಾಡಿ, ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿ ಕುಚ್ಚೂರು ಕಂಚರ್ಕಳ ಎಂಬಲ್ಲಿ ಕಿರು ಸೇತುವೆ ಸಿಥಿಲಗೊಂಡಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದ್ದು, ಇದರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಸರಕಾರ ನೂತನ ಸೇತುವೆಗೆ ಸುಮಾರು 2ಕೋಟಿ ರೂ.ಅನುದಾನ ಬಿಡುಗಡೆ ಮಾಡಿತ್ತು ಎಂದರು.ಈ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಿದ ಪರಿಣಾಮ ನಿರಂತರವಾಗಿ ಸುರಿದ ಭಾರೀ ಮಳೆಗೆ ಈ ಬದಲಿ ರಸ್ತೆ ಕೊಚ್ಚಿಕೊಂಡು ಹೋಗಿದೆ.

ಈ ಬಗ್ಗೆ ಕಳೆದ 9 ತಿಂಗಳ ಹಿಂದೆ ಸಂಬಂಧಪಟ್ಟ ಅಧಿಕಾರಿ ಗಳ ಗಮನ ತಂದು ಮಳೆಗಾಲ ಮೊದಲೇ ಕಾಮಗಾರಿ ನಡೆಸುವಂತೆ ತಿಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಸುಮಾರು 10 ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ದೂರಿದರು.ಹೆಬ್ರಿಯಿಂದ ಕುಚ್ಚೂರು ಮಾಂಡಿಮೂರ್ ಕೈ ಸಂಪರ್ಕಿಸುವ ವಾಹನಗಳು ಸೀತಾನದಿ ಸೋಮೇಶ್ವರ ಮಾರ್ಗದಲ್ಲಿ ಅಥವಾ ಬೇಳಂಜೆ ಮೀನುಗದ್ದೆ ಆರ್ಡಿ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.

ಈ ಮಾರ್ಗದಲ್ಲಿ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ದಿನ ನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ. ಆದುದರಿಂದ ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸದಿದ್ದರೆ ಮುಂದೆ ರಾಜ್ಯ ಹೆದ್ದಾರಿಯನ್ನು ತಡೆದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಿಥನ್, ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, ಯಾರಿಗೂ ತೊಂದರೆ ಆಗದಂತೆ ಬದಲಿ ರಸ್ತೆಯನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.