ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ: ಅಪಘಾತದಲ್ಲಿ 241 ಮಂದಿ ಮೃತ್ಯು.

ನವದೆಹಲಿ: ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಜೂ.12 ರಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ತಕ್ಷಣ ಪತನಗೊಂಡಿತು, ಇದು ಭಾರತದ ಇದುವರೆಗಿನ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ ಒಂದಾಗಿದೆ. ಲಂಡನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಇದ್ದರು.

ಸೀಟ್ ಸಂಖ್ಯೆ 11A ಯ ಪ್ರಯಾಣಿಕನೊಬ್ಬ ಅಪಘಾತದಲ್ಲಿ ಬದುಕುಳಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12.41 ಕ್ಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಏರ್ ಇಂಡಿಯಾ, 241 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿತು.

ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು 1 ಕೆನಡಾ ಪ್ರಜೆ ಸೇರಿದ್ದಾರೆ. ಬದುಕುಳಿದವರು ಭಾರತೀಯ ಮೂಲದ ಬ್ರಿಟಿಷ್ ಪ್ರಜೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ ಏರ್ ಇಂಡಿಯಾ, ತನ್ನ ತಂಡಗಳು ತನಿಖೆಗೆ ಬೆಂಬಲ ಮತ್ತು ಸಹಕಾರ ನೀಡುತ್ತಿವೆ ಎಂದು ಹೇಳಿದೆ.