ಕೊಲ್ಲೂರು ಅಭಯಾರಣ್ಯದಲ್ಲಿ ಟೆಂಟ್ ಪತ್ತೆ: ಊಹಾಪೋಹಗಳಿಗೆ ಬಿತ್ತು ತೆರೆ

ಕುಂದಾಪುರ: ಕೊಲ್ಲೂರು ಸಮೀಪ ದಳಿ ಹಾಗೂ ಅರಿಶಿನ ಗುಂಡಿ ಫಾಲ್ಸ್ ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್ ಅನ್ನು ಯಾರೋ ವಿರಕ್ತರು ದ್ಯಾನಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಎಎನ್‍ಎಫ್ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದೆರಡು ದಿನಗಳಿಂದ ಕೊಲ್ಲೂರು ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್‍ಗೂ ನಕ್ಸಲರಿಗೂ ಸಂಬಂಧವಿದೆ ಎಂಬ ಊಹಾಪೋಹ, ಚರ್ಚೆಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ.

ಸೋಮವಾರ ಕಾಡಿಗೆ ಹೋದ ಸ್ಥಳೀಯರಿಗೆ ಅಭಯಾರಣ್ಯದಲ್ಲಿ ಟೆಂಟ್ ಕಣ್ಣಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಎಎನ್‍ಎಫ್ ಪಡೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಎಎನ್‍ಎಫ್ ದಳ ಆಗಮಿಸಿ ಪರಿಶೀಲನೆ ನಡೆಸಿ, ಸಿಕ್ಕಿದ ವಸ್ತು ಹಾಗೂ ಬಟ್ಟೆಗಳನ್ನು ಪರಿಶೀಲಿಸಿ ಬಳಿಕ ಸತ್ಯಾಂಶ ಬೆಳಕಿಗೆ ಬಂದಿದೆ. ಈ ಟೆಂಟ್ ಅನ್ನು ಯಾರೋ ಧ್ಯಾನಕ್ಕಾಗಿ ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಹೊರಹಾಕಿದ್ದಾರೆ.

ಟೆಂಟ್ ಒಳಗೆ ಒಲೆ ಉರಿಸುವ ಪ್ರಯತ್ನ ನಡೆದಿದ್ದು, ಅಕ್ಕಿ ಹಾಗೂ ಬನ್ ಸಿಕ್ಕಿದೆ. ರಾತ್ರಿ ವಿಶ್ರಾಂತಿಗೆ ಚಪ್ಪಟೆ ಕಲ್ಲುಗಳ ಸಾಲಾಗಿ ಜೋಡಿಸಿಡಲಾಗಿದ್ದು, ಒಲೆ ಉರಿಸಲು ಕಟ್ಟಿಗೆಯನ್ನೂ ಕೂಡಾ ಟೆಂಟ್ ಬಳಿ ತಂದು ಹಾಕಲಾಗಿದೆ. ಸನ್ಯಾಸಿಗಳು ಹಾಕಿಕೊಳ್ಳುವ ಬಿಳಿ ಜುಬ್ಬ, ಹಾಗೂ ಮುಂಡು ಬಿಳಿ ಪಂಚೆ ಸಿಕ್ಕಿದ್ದು, ಯಾರೋ ದ್ಯಾನದ ಹಿನ್ನೆಲೆಯಲ್ಲಿ ಬಂದಿದ್ದು, ಮಳೆಗೆ ಹಿಂದಿರುಗಿರಬೇಕು. ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.


ಅರಿಶಿನ ಗುಂಡಿ ಹಾಗೂ ದಳಿ ನಡುವೆ ಟೆಂಟ್ ಇರುವ ಬಗ್ಗೆ ಅರಣ್ಯಕ್ಕೆ ಹೋದವರು ಮಾಹಿತಿ ನೀಡಿದ್ದು, ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಎಎನ್‍ಎಫ್ ಗಮನಕ್ಕೆ ತಂದಿದ್ದರು. ಎಎನ್‍ಎಫ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನಕ್ಸಲರಿಗೂ ಹಾಗೂ ಟೆಂಟ್‍ಗೂ ಯಾವುದೇ ಸಂಬಂಧ ಇಲ್ಲ ಎಂದು ದೃಢಪಡಿಸಿದ್ದಾರೆ. ಯಾರೋ ಧ್ಯಾನಕ್ಕೆ ತಾತ್ಕಾಲಿಕ ಟೆಂಟ್ ಹಾಕಿಕೊಂಡಿದ್ದು, ಜೋರು ಮಳೆಗೆ ಹಿಂದಿರುಗಿರುವ ಸಾಧ್ಯತೆ ಇದೆ.
-ರಾಘವೇಂದ್ರ ನಾಯ್ಕ್, ಆರ್‍ಎಫ್‍ಒ, ಕೊಲ್ಲೂರು.