ಕಾರ್ಕಳ: ಹುಟ್ಟುಹಬ್ಬದ ದಿನವೇ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಸಂಭವಿಸಿದೆ.
ಕುಕ್ಕುಂದೂರು ಗ್ರಾಮದ ಪರಪು ನಿವಾಸಿ, ಆಟೋ ಚಾಲಕ, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಮೃತಪಟ್ಟವರು.
ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲೆಂದು ಮನೆಯಿಂದ ಪೇಟೆಗೆ ಬಂದಿದ್ದ ಸುಬ್ರಹ್ಮಣ್ಯ ಅವರು ವಾಪಸ್ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಸಹಿತ ಹೊಳೆಗೆ ಬಿದ್ದಿದ್ದಾರೆ. ರಾತ್ರಿ 10:30ರ ವೇಳೆ ಘಟನೆ ಸಂಭವಿಸಿದೆ. ರಾತ್ರಿಯಿಡೀ ಹುಡುಕಾಡಿದರೂ ಸುಬ್ರಹ್ಮಣ್ಯ ಅವರ ಸುಳಿವು ಸಿಕ್ಕಿರಲಿಲ್ಲ. ಊರಿನವರು ಹುಡುಕುವಾಗ ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ.
ಮೃತರು ತಂದೆ, ತಾಯಿ, ಸಹೋದರಿ, ಪತ್ನಿ, ಪುತ್ರಿ ಅವರನ್ನು ಅಗಲಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















