ಇಲ್ಲಿ ವಿದ್ಯಾರ್ಥಿಗಳಿಗೆ ಪಾಠ ಇಲ್ಲ, ಬರೀ ಆಟ ಮಾತ್ರ: ಶಿಕ್ಷಕರೇ ಇಲ್ಲ,ಮಕ್ಕಳಿಗೆ ಆಟದ ಮೈದಾನವೇ ಎಲ್ಲಾ !

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ

ಕುಂದಾಪುರ: ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ಎನ್ನುವ ಸರ್ಕಾರದ ಆಶಯ ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿಬಿಟ್ಟಿವೆ. ಆಳುವ ಸರ್ಕಾರಗಳು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ನಡೆಗಳಿಂದಾಗಿ ಇಂದು ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದರೂ ಇನ್ನೂ ಕೂಡ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳು ಪಾಠ ಕಲಿತಂತೆ ಕಾಣುತ್ತಿಲ್ಲ.

ಪಶ್ಚಿಮಘಟ್ಟದ ಬುಡ ಎಂದು ಕರೆಯಲ್ಪಡುವ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಓರ್ವ ಶಿಕ್ಷಕ ಕೌನ್ಸಲಿಂಗ್‌ಗೆ, ಇನ್ನೋರ್ವ ಶಿಕ್ಷಕಿ ರಜೆಗೆ..:
ಬೈಂದೂರು ವಿಧಾನಸಭಾ ವ್ಯಾಪ್ತಿಯ ಯಡಮೊಗೆ ಗ್ರಾಮದ ಹಲವರಿಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರು ಗೈರಾಗುತ್ತಿದ್ದು ಮಕ್ಕಳು ಆತಂಕದಲ್ಲಿ ಶಾಲೆಗೆ ಬರಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದೆಡೆ ಪಶ್ಚಿಮಘಟ್ಟದ ತಪ್ಪಲು, ಸುತ್ತಲೂ ಕಾಡು ಪ್ರದೇಶದ ನಡುವೆಯಿರುವ ಈ ಶಾಲೆಗೆ ಗೋಳಿಬೇರು, ಹೊಸಬಾಳು, ಉಪ್ಪಿನಮಕ್ಕಿ, ವಡ್ನಾಳಿ, ಕೊಳಾಳಿ ಮೊದಲಾದ ಭಾಗಗಳಿಂದ ೪೪ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ.

ಒಬ್ಬರು ಮುಖ್ಯಶಿಕ್ಷಕ ಹಾಗೂ ಓರ್ವ ಶಿಕ್ಷಕಿ ಶಾಲೆಯಲ್ಲಿ ಖಾಯಂ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದು, ಇದೀಗ ಮುಖ್ಯಶಿಕ್ಷಕ ಚಂದ್ರಶೇಖರ್ ಮೈಸೂರಿನಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್‌ಗೆ ತೆರಳಿದ್ದಾರೆ. ಇರುವ ಓರ್ವ ಶಿಕ್ಷಕಿ ಲೀಲಾ ಅವರು ತಾಯಿ ನಿಧನದ ಹಿನ್ನೆಲೆ ರಜೆ ಹಾಕಿದ್ದರಿಂದ ಇದೀಗ ವಿದ್ಯಾರ್ಥಿಗಳು ತೊಂದರೆಯನುಭವಿಸುತ್ತಿದ್ದಾರೆ.

ಪಶ್ಚಿಮಘಟ್ಟದ ಸೆರಗಿಗೆ ಹೊಂದಿಕೊಂಡಿರುವ ಈ ಶಾಲೆಗೆ ಸೂಕ್ತ ತಡೆಬೇಲಿ ಇಲ್ಲದೇ ಇರುವುದರಿಂದ ಯಾವ ಕ್ಷಣದಲ್ಲಾದರೂ ಕಾಡು ಪ್ರಾಣಿಗಳು ದಾಳಿ ನಡೆಸಿ ಅಪಾಯಗಳು ಸಂಭವಿಸಬಹುದೆಂದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಪೋಷಕರು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಇಲಾಖೆಯ ಬೇಜವಬ್ದಾರಿ ನಡೆಗೆ ಆಕ್ರೋಶ:
ಹಲವರಿಮಠ ಶಾಲೆಗೆ ಕೆಲ ದಿನಗಳಿಂದ ಸಮೀಪದ ಶಾಲೆಯಾದ ಯಡಮೊಗೆ ಅಜ್ಜಿಕಾನ್ ಶಾಲೆಯ ಶಿಕ್ಷಕರನ್ನು ನಿಯೋಜಿಸುತ್ತಿದ್ದರು. ಆದರೆ ಬುಧವಾರ ಬೆಳಿಗ್ಗೆ ಯಾವುದೇ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ. ಮಧ್ಯಾಹ್ನದವರೆಗೆ ಅಕ್ಷರದಾಸೋಹ ಸಿಬ್ಬಂದಿಗಳೇ ಮಕ್ಕಳನ್ನು ನೋಡಿಕೊಂಡಿದ್ದು, ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರು ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಯಡಮೊಗೆ ಅಜ್ಜಿಕಾನ್ ಶಾಲೆಯ ಶಿಕ್ಷಕಿ ಪ್ರತಿಮಾರಾಣಿ ಅವರನ್ನು ಶಾಲೆಗೆ ಕಳುಹಿಸಿದ್ದಾರೆ.

ಶಿಕ್ಷಕರು ರಜೆಯಲ್ಲಿದ್ದರೆ ವಿದ್ಯಾರ್ಥಿಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ನಡೆಯ ವಿರುದ್ದ ಆಕ್ರೋಶ ಸ್ಪೋಟಿಸಿದ್ದಾರೆ.

ಮಕ್ಕಳಿಗೆ ಆಟದ ಮೈದಾನವೇ 
ದಿನಬೆಳಿಗ್ಗೆ ತರಗತಿಯೊಳಗೆ ಕುಳಿತು ಪಾಠ ಪ್ರವಚನಗಳಲ್ಲಿ ತಲ್ಲೀನರಾಗಿರುತ್ತಿದ್ದ ವಿದ್ಯಾರ್ಥಿಗಳು ಇದೀಗ ಶಿಕ್ಷಕರಿಲ್ಲದೇ ಮೈದಾನದಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುತ್ತಿದ್ದರೆ, ಇನ್ನೂ ಕೆಲ ವಿದ್ಯಾರ್ಥಿಗಳು ಶಾಲೆಯ ಹೊರ ಜಗುಲಿಯಲ್ಲಿ ಕುಳಿತು ಆಟವಾಡುತ್ತಿರುವ ದೃಶ್ಯಗಳು ಬುಧವಾರ ಶಾಲೆಯಲ್ಲಿ ಕಂಡುಬಂದಿವೆ.

ಮದ್ಯಾವಧಿ ಪರೀಕ್ಷೆ ಸಮೀಪಿಸುತ್ತಿದ್ದು, ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಬೇಕಾದ ಶಿಕ್ಷಕರು ಶಾಲೆಗೆ ಬಾರದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಶಿಕ್ಷಣ ಇಲಾಖೆ ಈ ಕೂಡಲೇ ಗಮನಹರಿಸಿ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ವಂಡ್ಸೆಯಲ್ಲಿ ತಾಲೂಕು ಮಟ್ಟದ ಪ್ರತಿಭಾಕಾರಂಜಿ ನಡೆಯುತ್ತಿರುವುದುರಿಂದ ನನ್ನನ್ನು ಸೇರಿದಂತೆ ಸಿಆರ್‌ಪಿ, ಬಿಆರ್‌ಪಿ ಗಳೆಲ್ಲಾ ಪ್ರತಿಭಾಕಾರಂಜಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಹಲವರಿಮಠ ಶಾಲೆಯ ಶಿಕ್ಷಕರ ರಜೆಯ ಕುರಿತು ನನಗೆ ಸರಿಯಾಗಿ ನನಗೆ ಮಾಹಿತಿ ಇಲ್ಲ. ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನನಗೇನು ತಿಳಿದಿಲ್ಲ. ಇನ್ನೊಂದು ಶಾಲೆಯಿಂದ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಿಸಿದ್ದಾರಾ, ಆ ಶಾಲೆಯ ಶಿಕ್ಷಕರು ಎಲ್ಲಿ ಹೋಗಿದ್ದಾರೆ ಎಂಬುವುದರ ಕುರಿತು ಸೂಕ್ತ ಮಾಹಿತಿಯನ್ನು ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

-ಜ್ಯೋತಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು ವಲಯ

:
ಕಳೆದ ಒಂದು ವರ್ಷಗಳಿಂದೀಚೆಗೆ ನಿರಂತವಾಗಿ ಸಮಸ್ಯೆಗಳಾಗುತ್ತಿವೆ. ಮುಖ್ಯಶೀಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಕಳೆದ ಮೂರು ದಿನಗಳಿಂದ ಶಿಕ್ಷಕರಿಲ್ಲದೆ ಮಕ್ಕಳು ಅಭದ್ರತೆಯಲ್ಲಿದ್ದಾರೆ. ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮೂಲಕ ಗಮನಕ್ಕೆ ತಂದಿದ್ದೇವೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

-ರಾಘವೇಂದ್ರ ನಾಯ್ಕ್, ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ