ಆತ್ಮಗೌರವಕ್ಕೆ ವಂಚನೆ ಮಾಡದೆ ಬದುಕುವುದೇ ಮಾನವ ಹಕ್ಕು: ಪ್ರಕಾಶ್ ಕಣಿವೆ

ಉಡುಪಿ: ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಆತ್ಮಗೌರವಕ್ಕೆ ವಂಚನೆ ಮಾಡದೆ ಸಮಾಧಾನವಾಗಿ ಬದುಕುವುದೇ ಮಾನವ ಹಕ್ಕು ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್‌ ಕಣಿವೆ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ಯುತ್‌ ರೆಡ್‌ಕ್ರಾಸ್‌ ಘಟಕದ ವತಿಯಿಂದ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ನಿರ್ಲಕ್ಷ್ಯ ಮಾಡಿದರೆ, ಅದು ತಂದೆ ತಾಯಿಯ ಹಕ್ಕು ಉಲ್ಲಂಘನೆ ಆಗುತ್ತದೆ. ಅಲ್ಲದೆ, ಇದೂ ಅತೀ ಸೂಕ್ಷ್ಮ ಮಾನವ ಹಕ್ಕುಗಳ‌ ಉಲ್ಲಂಘನೆಯೂ ಆಗಿದೆ ಎಂದರು. ಭ್ರಷ್ಟಾಚಾರ ಎನ್ನುವುದು ಮಾನವ ಹಕ್ಕು ಉಲ್ಲಂಘನೆಯ ಮೂಲವಾಗಿದೆ. ಕಳಪೆ ಕಾಮಗಾರಿ, ಸರ್ಕಾರಿ ಕೆಲಸ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಕೂಡ ಮಾನವ ಹಕ್ಕಿನ ಉಲ್ಲಂಘನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. ಆದರೆ ಆ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ನ್ಯಾಕ್‌ ಸಂಚಾಲಕ ಅರುಣ್‌ ಕುಮಾರ್‌ ಉಪಸ್ಥಿತರಿದ್ದರು. ಆರ್ಟ್ಸ್‌ ಕ್ಲಬ್‌ ಸಂಚಾಲಕ ಸುರೇಂದ್ರನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್‌ಕ್ರಾಸ್‌ ಸಂಯೋಜಕ ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿದರು. ಚರಿಷ್ಮಾ ಕಾರ್ಯಕ್ರಮ ನಿರೂಪಿಸಿದರು.
ರೆಡ್‌ಕ್ರಾಸ್‌ ಕಾರ್ಯದರ್ಶಿ ಯಶವಂತ ಮೇಟಿ ವಂದಿಸಿದರು.