ಮಂಗಳೂರು: ಬಾಲಕನೋರ್ವನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಮಹೇಶ್ ಬಂಧಿತ ಆರೋಪಿ.
ಈತ 7 ವರ್ಷ ವಯಸ್ಸಿನ ಬಾಲಕನನ್ನು ಬೆಂಗಳೂರಿನ ಯಲಹಂಕದ ರೈಲ್ವೆ ನಿಲ್ದಾಣದಿಂದ ಅಪಹರಿಸಿ ತಂದು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿನ ಕಾರ್ಮಿಕ ಪೂರೈಕೆಯ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಇರಿಸಿ ಹೋಗಿದ್ದ.
ಈ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಬೆಂಗಳೂರಿನ ಬನಶಂಕರಿಯ ಶಿಲ್ಪಾ ಮತ್ತು ಆಕೆಯ ಪತಿ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹೇಶ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಸಂಪ್ಯ ಠಾಣಾ ಎಸ್ಐ ನೇತೃತ್ವದ ಪೊಲೀಸರು ಆರೋಪಿ ಮಹೇಶನನ್ನು ಕಬಕ ಎಂಬಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಆರೋಪಿ ಶಿಲ್ಪ , ಕೃತ್ಯ ಬಹಿರಂಗದ ಬಳಿಕ ಅನಾರೋಗ್ಯದ ಕಾರಣದಿಂದಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಇದೀಗ ಆಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಆದರೆ ಮಾದಕ ದ್ರವ್ಯ ವ್ಯಸನಿಯಾಗಿರುವ ಆಕೆ ವಿಚಾರಣೆಗೊಳಪಡಿಸುವ ಸ್ಥಿತಿಯಲ್ಲಿರದ ಕಾರಣ ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿಲ್ಲ.












