ಹಾಸನ: ವರ ತಾಳಿ ಕಟ್ಟುವ ವೇಳೆ ವಧು “ನನಗೆ ಮದುವೆ ಬೇಡ’ ಎಂದು ಹಠ ಹಿಡಿದಿದ್ದರಿಂದ ಮದುವೆ ಮುರಿದು ಬಿದ್ದ ಪ್ರಸಂಗ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿದೆ.
ಹಾಸನದ ಬೂವನಹಳ್ಳಿ ಬಡಾವಣೆ ನಿವಾಸಿ, ಸ್ನಾತಕೋತ್ತರ ಪದವೀಧರೆ ಪಲ್ಲವಿ ಹಾಗೂ ಆಲೂರು ತಾಲೂಕಿನ ತಿಮ್ಮನಹಳ್ಳಿಯ ಜಿ. ತಿಮ್ಮನಹಳ್ಳಿಯ ನಿವಾಸಿ, ಸರಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್ ಅವರ ಮದುವೆ 3 ತಿಂಗಳ ಹಿಂದೆ ನಿಶ್ಚಿಯವಾಗಿತ್ತು. ಇದರಂತೆ ಶುಕ್ರವಾರ ನಡೆಯಲಿತ್ತು. ಮಂಟಪದಲ್ಲಿ ವರ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ನಿರಾಕರಿಸಿದಳು.
ಪಲ್ಲವಿ ಕೆಲವು ವರ್ಷಗಳಿಂದ ಹಾಸನ ತಾಲೂಕಿನ ಗೊರೂರು ಸಮೀಪದ ಬನವಾಸೆ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಮಂಟಪಕ್ಕೆ ಹೋಗುತ್ತಿದ್ದಾಗ ಪ್ರಿಯಕರನಿಂದ ದೂರವಾಣಿ ಕರೆ ಬಂದಿದ್ದು, ಬಳಿಕ ತಾನು ಆತನನ್ನೇ ಮದುವೆ ಆಗುವೆ ಎಂದು ಹೇಳಿದ್ದರಿಂದ ಮದುವೆ ಮುರಿದು ಬಿತ್ತು.
ಪ್ರಿಯಕರನನ್ನು ವರಿಸಿದಳು:
ಈ ನಡುವೆ ರಘುವನ್ನು ಕರೆಸಿದ ಪಲ್ಲವಿ ಮನೆಯವರು ಆದಿಚುಂಚನ ಗಿರಿ ಮಠದ ಆವರಣದಲ್ಲಿರುವ ಗಣಪತಿ ದೇಗುಲದಲ್ಲಿ ಶುಕ್ರವಾರ ಸಂಜೆ ಪಲ್ಲವಿ – ರಘು ಮದುವೆಯನ್ನು ನೆರವೇರಿಸಿದರು.
1.75 ಲಕ್ಷ ರೂ. ಕೊಟ್ಟರು:
ವಧು ಪಲ್ಲವಿ ಹಠದಿಂದ ಮದುವೆ ಮುರಿದು ಬಿದ್ದು ಬೇಸರಗೊಂಡಿದ್ದ ವರ ವೇಣುಗೋಪಾಲ್ ಕುಟುಂಬದವರಿಗೆ ಪಲ್ಲವಿ ಕುಟುಂಬದವರು ಪೊಲೀಸರ ಸಮ್ಮುಖದಲ್ಲಿ 1.75 ಲಕ್ಷ ರೂ. ಖರ್ಚು ಪರಿಹಾರ ನೀಡಿದ್ದಾರೆ.












