ಉಡುಪಿ: ಆತ್ರಾಡಿ – ಬಜ್ಪೆ ಹೆದ್ದಾರಿಯಲ್ಲಿ ಪಟ್ಲ ಬಯಲಿನಲ್ಲಿ ನಡೆಯುತ್ತಿರುವ ಒಂದು ಚಿಕ್ಕ ತೋಡಿಗೆ ಸೇತುವೆ ನಿರ್ಮಾಣದ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಹಠಾತ್ ಮಳೆಯಿಂದ ಬಯಲು ದಾಟಲು ನಡೆದು ಹೋಗಲು ದಾರಿ ಇಲ್ಲದಂತಾಗಿದೆ.
ಈ ಸೇತುವೆಯ ಕಾಮಗಾರಿ ಕುರಿತು ಜಿಲ್ಲಾಧಿಕಾರಿಯವರು ವಾಹನಗಳನ್ನು ಬದಲಿ ದಾರಿಯಲ್ಲಿ ಚಲಿಸಿ ಸಹಕರಿಸುವಂತೆ ಸೂಚನೆಯನ್ನು ಪ್ರಕಟಿಸಿದ್ದರು.ಇಲ್ಲಿ ರಸ್ತೆ ಕಾಮಗಾರಿ ಸುಮಾರು ಹತ್ತನ್ನೆರಡು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿತ್ತು. ಅದೂ ಪೂರ್ಣಗೊಂಡಿಲ್ಲ. ಸುಮಾರು ನೂರು ಮೀಟರ್ ರಸ್ತೆ ರಿಪೇರಿ ಮತ್ತು ಬಯಲು ಪ್ರದೇಶದಲ್ಲಿ ಇದ್ದ ರಸ್ತೆಗೆ ಮಣ್ಣು ಹಾಕುವ ಕೆಲಸವೂ ಕೂಡ ಸಂಪೂರ್ಣವಾಗಿಲ್ಲ.
ಉತ್ತರದಿಕ್ಕಿನಲ್ಲೂ ಕಿರು ಸೇತುವೆ ನಿರ್ಮಾಣವಾಗಬೇಕಿತ್ತು. ಆದರೆ ಅಲ್ಲಿ ಕಾಂಕ್ರೀಟು ಪೈಪುಗಳನ್ನು ಹಾಕಿದ್ದಾರೆ.
ಈ ದಕ್ಷಿಣ ದಿಕ್ಕಿನಲ್ಲಿ ಕೇವಲ ಒಂದು ಸಣ್ಣ ಸೇತುವೆ ನಿರ್ಮಾಣ ಮಾಡಲೂ ಕೆಲಸ ವೇಗವನ್ನು ಪಡೆದಿಲ್ಲ.ಈ ರಸ್ತೆ ವಿಶೇಷವಾಗಿ ಶಾಲಾ ಮಕ್ಕಳಿಗೆ, ಬೇರೆಬೇರೆ ಉದ್ಯೋಗಳಿಗೆ ತೆರಳುವ ಮಹಿಳೆಯರಿಗೆ ಅತ್ಯಗತ್ಯ.ಪಟ್ಲಕ್ಕೆ ಬರುವ ಬಸ್ಸುಗಳನ್ನು ಅರ್ಧಕಿಮೀ ದೂರದ ಗುಡ್ಡೆಯಲ್ಲಿ ತಿರುಗಿಸಲಾಗುತ್ತಿದೆ.
ದ್ವಿಚಕ್ರವಾಹನಗಳಂತೂ ಬಹಳಷ್ಟು ಓಡಾಡುತ್ತವೆ.
ಮರ್ಣೆ, ಮೂಡುಬೆಳ್ಳೆ, ಹಿರೇಬೆಟ್ಟು, ಪೆರಣಂಕಿಲ, ಅಲೆವೂರು ಇತ್ಯಾದಿಗಳಿಗೆ ಸಂಪರ್ಕಿಸುವ ಈ ರಸ್ತೆ ಈಗ ಈ ನೆನೆಗುದಿ ಬಿದ್ದಿರುವ ಕಾಮಗಾರಿಯಿಂದ ಬಹಳಷ್ಟು ತೊಂದರೆಗಳಾಗುತ್ತಿವೆ.
ಶಾಲಾಕಾಲೇಜು ಮಕ್ಕಳಿಗೆ ಇದರಿಂದ ಆಗಿರುವ ತೊಂದರೆಗೆ ಈ ಕಾಮಗಾರಿ ವಹಿಸಿಕೊಂಡಿರುವವರು, ಲೋಕೋಪಯೋಗಿ ಇಲಾಖೆಯವರು ಮತ್ತು ಜನ ಪ್ರತಿನಿಧಿಗಳು ಏನು ಉತ್ತರಿಸುತ್ತಾರೆ ಎನ್ನುವುದಕ್ಕೆ ಜನ ಕಾಯುತ್ತಿದ್ದಾರೆ.
ಇಲಾಖೆಯ ಭ್ರಷ್ಟ ವ್ಯವಸ್ಥೆಗೆ ಈ ಕಾಮಗಾರಿಯೇ ಸಾಕ್ಷಿಯಾಗಿದೆ. ಕೆಲವರ ಪ್ರಕಾರ ಹಾಕಿರುವ ಕಾಂಕ್ರೀಟ್ ಪಿಲ್ಲರುಗಳ ಮುಂದಿನ ನೂರುವರ್ಷಗಳ ಕಾಲದ ಬಾಳ್ವಿಕೆಯನ್ನೂ ಹೊಂದಬೇಕು. ಈಗಿನ ಪಿಲ್ಲರ್ ಯಾವುದೇ ತಾಂತ್ರಿಕ ಲೆಕ್ಕಾಚಾರವಿಲ್ಲದೇ ನಿರ್ಮಿಸಿದಂತಿದೆ.ಇದನ್ನು ಶೀಘ್ರವಾಗಿ ಸರಿಪಡಿಸದಿದ್ದರೆ ಜನತೆ ಸಹನೆ ಕಳೆದುಕೊಳ್ಳಬಹುದೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.












