ಉಡುಪಿ: ಕರಾವಳಿಯಲ್ಲಿ ಶುರುವಾಯ್ತು ‘ಉಬರ್ ಮೀನು’ಗಳ ಭರ್ಜರಿ ಶಿಕಾರಿ…!

ಉಡುಪಿ: ಸಮುದ್ರ, ನದಿ ಬದಿ, ಕೆರೆಯಲ್ಲಿ ಫಿಶಿಂಗ್ ಮಾಡೋದನ್ನ ನೋಡಿದ್ದೇವೆ. ಗದ್ದೆಯಲ್ಲಿ ಬರಪೂರ ಮೀನುಗಳು ಸಿಗೋದನ್ನ ಎಲ್ಲಾದರೂ ನೋಡಿದ್ದೀರಾ? ಮೊದಲ ಮಳೆ ಬಿದ್ದೊಡನೆ ಕರಾವಳಿಯಲ್ಲಿ ಉಬರ್ ಮೀನು ಹಿಡಿಯುವ ಸಂಪ್ರದಾಯವಿದೆ.

ಮೊದಲ ಮಳೆಗೆ ಹಳ್ಳಕೊಳ್ಳ, ಕಾಲುವೆಗಳು ಉಕ್ಕಿ ಹರಿಯುತ್ತದೆ. ಈ ಸಂದರ್ಭ ಮೀನುಗಳೆಲ್ಲ ನೀರಿನಲ್ಲಿ ಈಜುತ್ತ ಗದ್ದೆಗೆ ಇಳಿಯುತ್ತದೆ. ಗದ್ದೆಗಿಳಿದ ಮೀನನ್ನು ರಾತ್ರಿ ಟಾರ್ಚ್ ಲೈಟ್ ಗಳನ್ನು ಬಳಸಿ ಮೀನುಗಳನ್ನು ಹಿಡಿಯಲಾಗುತ್ತದೆ. ಉಡುಪಿಯ ಕಾಪು ಕುರ್ಕಾಲು ಪರಿಸರದಲ್ಲಿ ಕಳೆದ ರಾತ್ರಿ ಭಾರಿ ಗಾತ್ರದ ಮುಗುಡು ಮೀನುಗಳು ಸಿಕ್ಕಿವೆ. ಮಳೆಗಾಲ ಆರಂಭವಾಗುವ ಮೊದಲ ಒಂದು ವಾರ ಮಾತ್ರ ಈ ಮೀನುಗಳು ಗದ್ದೆಗಿಳಿಯುತ್ತದೆ.

ಈ ಸಂದರ್ಭ ಆ ಮೀನುಗಳನ್ನು ಕ್ಯಾಚ್ ಮಾಡಲಾಗುತ್ತದೆ. ಇಂಗ್ಲಿಷ್ ನಲ್ಲಿ ಇದನ್ನು ಕ್ಯಾಟ್ ಫಿಶ್, ಏಶಿಯನ್ ಕ್ಯಾಟ್, ವಾಕಿಂಗ್ ಕ್ಯಾಟ್ ಫಿಶ್ ಅಂತ ಕರೆಯುತ್ತಾರೆ. ಸಮುದ್ರ ಮತ್ತು ನದಿ ನೀರಿಗೆ ಹೋಲಿಸಿದರೆ ಈ ಮೀನು ಬಹಳ ರುಚಿಕರವಾಗಿರುತ್ತದೆ.