ಉಡುಪಿ:ಮೊಗೇರ ಜನಾಂಗದ ಕುಲದೈವಗಳಾದ ಮುದ್ದ ಕಳಲ ತನ್ನಿ ಮಾನಿಗ ಜನ್ಮಸ್ಥಳ ಕಾಪು ತಾಲೂಕು ಕುತ್ಯಾರು ಮೂಲ್ದೊಟ್ಟು ಮುಗೇರ ನಾಗಬನದಲ್ಲಿ ವಾರ್ಷಿಕ ನಾಗರಾಧನೆ, ಅನ್ನಸಂತರ್ಪಣೆ ತಾ. 22.5.2025 ರಂದು ಮೊಗೇರ ಸಮಾಜದ ಗುರಿಕಾರರಾದ ಉದಯ್ ಶಿರ್ವ , ರಂಜಿತ್ ಶಿರ್ವ, ಸಂದೇಶ್ ಶಿರ್ವ ಹಾಗೂ ಮೊಗೆರ ಸಮಾಜದ ಇತರ ಸದಸ್ಯರ ನೇತೃತ್ವದಲ್ಲಿ ನಡೆಯಿತು.
ಮೂಲ್ದೊಟ್ಟು ಈ ಪ್ರದೇಶ ಒಂದು ಕಾಲದಲ್ಲಿ ಅರಣ್ಯ ಪ್ರದೇಶವಾಗಿತ್ತು. ತುಳುನಾಡಿನ ಮೂಲನಿವಾಸಿಗಳಾದ ಮೊಗೇರರ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದರು. ಮೊಗೇರರ ಬನ (ವನ) ಮೂಲ್ದೊಟ್ಟು ಬನ. ಇಲ್ಲಿ ವಿಶೇಷವಾಗಿ ಮೊಗೇರರು ‘ಮುರಿ’ ಯನ್ನು ಇಟ್ಟು ನಾಗಾರಾಧನೆಯನ್ನು ಮಾಡುತ್ತಾರೆ. ‘ಮುರಿ’ ಎಂದರೆ ನಾಗನ ಹೆಡೆ ಇರುವ ಮಣ್ಣಿನ ಗಡಿಗೆ(ಕುಂಭ) ಯಲ್ಲಿ ನೀರನ್ನು ತುಂಬಿಸಿ ನಾಗಬ್ರಹ್ಮನನ್ನು ಆರಾಧಿಸುವುದು. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಮಣ್ಣಿನ ಮಡಿಕೆ(ಕಳಸದಲ್ಲಿ) ಯಲ್ಲಿ ನೀರನ್ನು ತುಂಬಿ ದೇವರನ್ನು ಆರಾಧಿಸುವುದು ಜಗತ್ತಿನ ಮೊದಲ ಆರಾಧನೆ.
ಬೇಶ(ವೃಶಭ) ಮಾಸದ ಮೊದಲ ಗುರುವಾರ 16 ಮಾಗಣೆಯ ಮೊಗೇರರು(ಮುಗೆರ್ಲು) ಒಟ್ಟಾಗಿ ತಮ್ಮ ಸಮುದಾಯದ ಗುರಿಕಾರರೊಂದಿಗೆ ಈ ದಿನ ಬೆಳಿಗ್ಗೆ ಮೂಲ್ದೊಟ್ಟು ಬನದ ಬಳಿ ಸೇರುತ್ತಾರೆ. ಎಲ್ಲರೂ ಮೊದಲು ನಮ್ಮ ಮೂಲ್ದೊಟ್ಟು ಮನೆಗೆ ಬಂದು ಇವರ ಕುಲಕಸುಬಿನ ತಯಾರಿಕೆಯಾದ ಕೊರಂಬು(ಗೊರಬು) ತಂದು ಗುತ್ತಿಗೆ ಕಾಣಿಕೆ ನೀಡುತ್ತಾರೆ.
(ಹಿಂದಿನ ಕಾಲದಲ್ಲಿ).ಗುತ್ತಿನ ಮನೆಯ ಮೆಟ್ಟಿಲ ಮೇಲೆ ತಾಂಬೂಲ ಇಟ್ಟು ಧರ್ಮ ಚಾವಡಿಯ "ಉಜ್ಜಾಲ್ಗೆ" ಯಲ್ಲಿರುವ ಧರ್ಮ ದೈವ ಜುಮಾಧಿ(ಧೂಮಾವತಿ) ಗೆ ಕೈ ಮುಗಿದು ಅಪ್ಪಣೆ ಪಡೆಯುತ್ತಾರೆ. ನಂತರ ಮನೆಯಿಂದ ಎಣ್ಣೆ, ಬತ್ತಿ, ಭತ್ತವನ್ನು ಸ್ವೀಕರಿಸುತ್ತಾರೆ. ಪುರಾತನ ಪದ್ದತಿಯಂತೆ ಗಂಜಿ, ಚಹಾ ಕುಡಿದು ತಮ್ಮ ಬನಕ್ಕೆ ತೆರಳುತ್ತಾರೆ. ಇವರ ಗುರಿಕಾರರು ಈ ದಿನ ಉಪವಾಸ ಇರುತ್ತಾರೆ. ನಂತರ ಸ್ನಾನ ಮಾಡಿ ಬನಕ್ಕೆ ತೆರಳಿ ಬನವನ್ನು ಸ್ವಚ್ಛಗೊಳಿಸಿ ನಾಗನಿಗೆ ತನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಇದು ತುಳುನಾಡಿನ ಜಾನಪದ ಪರಂಪರೆಯಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ನಡೆಯುವ ಆರಾಧನೆ. " ಮುರಿ ಮಯ್ಪುನು" ಇಲ್ಲಿಯ ವಿಶಿಷ್ಟ ಹರಕೆ.ಇಲ್ಲಿರುವ ಚಿತ್ರದಲ್ಲಿ ನಾಗನ ಕಲ್ಲುಗಳ ಮಧ್ಯೆ ಮುರಿಗಳನ್ನುನಾವು ಕಾಣಬಹುದು.
ಹೆಚ್ಚಾಗಿ ಮಕ್ಕಳಿಲ್ಲದವರು ಮಕ್ಕಳಾಗಲು ಈ ಹರಕೆಯನ್ನು ಹೇಳುತ್ತಾರೆ. ಕುಂಬಾರರ ಮನೆಯಿಂದ ಹೊಸ 'ಮುರಿ' ಯನ್ನು ಇವರ ಗುರಿಕಾರ ಮಡಿಯಿಂದ ತಲೆಯ ಮೇಲೆ ಹೊತ್ತುಕೊಂಡು ಬಂದು ಬನದಲ್ಲಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ಅವರು ಬನದಿಂದ ನಿರ್ಗಮಿಸಿದರೆ ಮುಂದಿನ ವರ್ಷವೇ ಇವರು ಬನಕ್ಕೆ ಬರುವುದು. ಅದರ ಮದ್ಯೆ ಬನಕ್ಕೆ ಯಾರಿಗೂ ಪ್ರವೇಶವಿಲ್ಲ.ಈ ಬನದಲ್ಲಿ ಪೂಜೆ ಮಾಡುವವರು ಮೊಗೇರ ಜನಾಂಗದ ಗುರಿಕಾರ ಮಾತ್ರ. ಬ್ರಾಹ್ಮಣರಿಗೆ ಇಲ್ಲಿ ಪೂಜೆಗೆ ಅವಕಾಶವಿಲ್ಲ.
ಪುರಾತನ ಕಾಲದಲ್ಲಿ ಅಂದರೆ ಬ್ರಾಹ್ಮಣರು(ವೈದಿಕ ಸಂಸ್ಕೃತಿ) ತುಳುನಾಡಿಗೆ ಬರುವ ಮುಂಚೆ ಆಯಾಯ ಸಮುದಾಯದ ಆಯಾಯ ಮನೆತನದ ಕುಟುಂಬದ ಗುರಿಕಾರ(ಯಜಮಾನ) ರೇ ಅವರ ಮೂಲದ ನಾಗಬನಗಳಿಗೆ ಮತ್ತು ಮನೆದೈವಗಳಿಗೆ ಪೂಜೆಗಳನ್ನು ಮಾಡುತ್ತಿದ್ದರು. ಈಗಲೂ ತುಳುನಾಡಿನ ಒಂದೆರಡು ಕಡೆ ಈ ಸಂಪ್ರದಾಯ ಚಾಲ್ತಿಯಲ್ಲಿದೆ.
ಮೊಗೇರರ ಆರಾಧ್ಯ ದೈವಗಳಾದ ಮುದ್ದ - ಕಳಲ ಹಾಗೂ ತನ್ನಿಮಾನಿಗ(ಬಬ್ಬುವಿನ ತಂಗಡಿ) ಈ ಮೂವರು ಜನಿಸಿದ ಸ್ಥಳ ಇದೇ ಪ್ರದೇಶವಾಗಿದೆ ಎಂದು ಗೋವಿಂದ ಮಾಸ್ತರರು ಸಂಗ್ರಹಿಸಿರುವ "ಮೊಗೇರ್ಲೆ ಪಾಡ್ದನ" ದಲ್ಲಿ ಉಲ್ಲೇಖಗೊಂಡಿದೆ.
ಯುದ್ಧದಲ್ಲಿ ಹೋರಾಡಿ ಜಯವನ್ನು ತಂದಿತ್ತ ಮೊಗೇರರಿಗೆ ಕುತ್ಯಾರಿನ ಬೈಲಸೂಡ ಅರಸರು ಸನ್ಮಾನದ ಬೋಜನಕೂಟ ಏರ್ಪಡಿಸಿದಾಗ ಬೇಯಿಸಿದ ಅನ್ನದ ಕೊಪ್ಪರಿಗೆಗೆ ಮಂತ್ರಿಯು ವಿಷದ ಕಾಯಿಯನ್ನು ಬೆರೆಸಿದ ಕಾರಣ ಮೊಗೇರರ ಕುಲವೇ ವಿನಾಶದತ್ತ ಸಾಗಿದಾಗ ಮುದ್ದ, ಕಳಲ, ತನ್ನಿಮಾನಿಗ ಈ ಮೂರು ಮಕ್ಕಳು ಪವಾಡ ಸದೃಶ ಸಾವಿನಿಂದ ಪಾರಾಗಿ ಬದುಕುಳಿಯುತ್ತಾರೆ. ಇವರನ್ನು ಅರಸರು ಮೂಲ್ದೊಟ್ಟು ನಾಗಬನದ ಬಳಿ ತಂದು 'ಪೂರ್ವ ಕಾಲದಿಂದಲೇ ಮೊಗೇರರು ನಡೆಸುತ್ತಿದ್ದ ತನು-ತರ್ಪಣವನ್ನು ಇಲ್ಲಿಯೇ ಮುಂದುವರಿಸಿ ಕೊಂಡು ಹೋಗುತ್ತೇವೆ' ಎಂದು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರಂತೆ. ಆನಂತರ ಆ ಮಕ್ಕಳು ವೀರರಾಗಿ ಮೆರೆದು ದೈವಗಳಾಗಿ ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾಗಿ ಸ್ಥಾನ ಪಡೆದುಕೊಂಡಿದ್ದು ಇತಿಹಾಸ. ಅಂದಿನ ಸಂಪ್ರದಾಯವನ್ನು ಮೊಗೇರರು ತುಂಬಾ ಶ್ರದ್ದಾಭಕ್ತಿಯಿಂದ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿಯೇ ಮೂಲ್ದೊಟ್ಟು ಬನವು ಕಾರಣಿಕ ಶಕ್ತಿ ಕೇಂದ್ರವಾಗಿ, ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿದೆ.
ಈ ಪರಿಶಿಷ್ಟ ವರ್ಗಕ್ಕೆ ಸೇರಿದ ಮೊಗೆರ ಸಮಾಜದ ಇತಿಹಾಸ ಪ್ರಸಿದ್ಧ ನಾಗ ಬನಕ್ಕೆ ಮೂಲ ಸೌಕರ್ಯದಿಂದ ವಂಚಿತರಾಗಿದ್ದು ರಸ್ತೆ, ನೀರು ಇಲ್ಲದೆ ಸಾವಿರಾರು ಭಕ್ತರಿಗೆ ತುಂಬಾ ಅನಾನುಕೂಲವಾಗಿದೆ. ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಿತ್ತ ಗಮನಹರಿಸಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿಯ ಮೂಲಭೂತ ಸೌಕರ್ಯ ದ ಸಮಸ್ಯೆ ಬಗ್ಗೆ ಬಗೆಹರಿಸಿ ಕೊಡಬೇಕಾಗಿ ಮೂಲದಬೆಟ್ಟು ಗುತ್ತು ಮನೆತನದ ಸದಸ್ಯರುಗಳಾದ ಪ್ರದೀಪ್ ಶೆಟ್ಟಿ, ಸಮಾಜ ಸೇವಕ ದಿವಾಕರ್ ಬಿ ಶೆಟ್ಟಿ ಕಳತೂರು ಮನವಿ ಮಾಡಿದ್ದಾರೆ.












