ಕಾಪು: ಬುರ್ಖಾಧಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ: ಆರೋಪಿಗಳ ಪತ್ತೆಗೆ ಕ್ರಮ -ಉಡುಪಿ ಎಸ್ಪಿ

ಉಡುಪಿ : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಈ ಸಂಬಂಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಹಮ್ಮದ್ ಅಲಿ ಎಂಬುವರ ಮನೆಗೆ ಇಬ್ಬರು ಬುರ್ಖಾಧರಿಸಿದ ಮಹಿಳೆಯರು ಬಂದಿದ್ದಾರೆ. ಈ ವೇಳೆ ನೆರೆಮನೆಯ ಹುಡುಗಿ ಕಿರುಚಾಡಿದ್ದಾಳೆ. ಈ ಸಂದರ್ಭ ಬಂದಿದ್ದ ಇಬರು ಮಹಿಳೆಯರು ಐದೂವರೆ ತಿಂಗಳ ಮಗುವನ್ನು ಅಲ್ಲಿಯೇ ಬಿಟ್ಟು ನೆರೆಮನೆಯ ಹುಡುಗಿಯನ್ನು ತಳ್ಳಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಮಗುವಿನ ತಾಯಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಎಸ್ಪಿ ಹೇಳಿದ್ದಾರೆ.