ಉಡುಪಿ: ಶಿಕ್ಷಕರು ವಿವಿಧ ರೀತಿಯ ಒತ್ತಡದಿಂದ ಕೆಲಸ ಮಾಡುವ ಬದಲು ನಿರಾಳತೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಬದ್ಧವಾಗಿದೆ ಎಂದು ಮುಜುರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶಿಕ್ಷಕರಿಗೆ ಉಚಿತ ಆರೋಗ್ಯ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಒಟ್ಟು ಶಿಕ್ಷಕರಲ್ಲಿ ಶೇ. 60ರಿಂದ 65ರಷ್ಟು ಮಹಿಳಾ ಶಿಕ್ಷಕರಿದ್ದು, ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಿಂದ ಅವರು ಒತ್ತಡದಿಂದ ಕೆಲಸ ಮಾಡುವಂತಾಗಿದೆ. ಆದ್ದರಿಂದ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆಲಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಇಲಾಖಾ ಸಚಿವರು ಕಾರ್ಯಪ್ರವೃತ್ತರಾಗುವ ಸಂಪೂರ್ಣ ವಿಶ್ವಾಸವಿದೆ. ಈ ಬಗ್ಗೆ ಶಿಕ್ಷಕರು ಚಿಂತಿಸಬೇಕಾದ ಅಗತ್ಯವಿಲ್ಲ ಎಂದರು.
ಪ್ರಾಥಮಿಕ ಹಂತದಿಂದ ಪದವಿ ಶಿಕ್ಷಣದ ತನಕವೂ ಮಕ್ಕಳಿಗೆ ವಿದ್ಯೆ, ಬುದ್ಧಿ ನೀಡುವ ಶಿಕ್ಷಕರಿಗೆ ಗೌರವಯುತ ಸ್ಥಾನಮಾನ, ನೆಮ್ಮದಿ ವಾತಾವರಣ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿದರು.
ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ. ಎನ್.ಆರ್. ರಾವ್, ನರರೋಗ ತಜ್ಞ ಪ್ರೊ. ಎ. ರಾಜಾ, ಹಿರಿಯ ಆಯುರ್ವೇದ ತಜ್ಞ ಡಾ. ಟಿ. ಶ್ರೀಧರ ಬಾಯರಿ, ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಶಿಕ್ಷಕ ಪ್ರಶಾಂತ್
ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ:
ಬೈಂದೂರು ವಲಯದಿಂದ ಕೆ. ರಾಮಣ್ಣ ನಾಯ್ಕ್, ಸೀತಾರಾಮ ಶೆಟ್ಟಿ, ಶಂಕರ ಶಿರೂರು, ಸಂತೋಷ್ ಭಂಡಾರಿ, ಪಿ. ಪ್ರದೀಪ್ ಕುಮಾರ್, ವೇದಾವತಿ, ಕುಂದಾಪುರ ವಲಯದಿಂದ ಸೀತಾಲಕ್ಷ್ಮೀ, ಬಿ. ಕಿರಣ ಕುಮಾರ್, ಚಿದಾನಂದ, ಶುಭಾ ಶೇಟ್, ಬಿ. ಉದಯ ಕುಮಾರ್ ಹೆಗ್ಡೆ, ಮಹಾಬಲೇಶ್ವರ ಚಿದಂಬರಂ ಭಾಗ್ವತ್. ಬ್ರಹ್ಮಾವರ ವಲಯದಿಂದ ಜಿ. ಉದಯ ಮಯ್ಯ, ಮಂಜುನಾಥ ನಾಯ್ಕ್ ಚಾಂತಾರು, ಅಭಿಲಾಷಾ ಎಸ್. ವತ್ಸಲಾ, ಕೆ. ಕಿರಣ ಹೆಗ್ಡೆ, ಭಾಸ್ಕರ ಪೂಜಾರಿ, ಕಾರ್ಕಳ ವಲಯದಿಂದ ಸುಧಾಕರ ಶೆಟ್ಟಿ, ಲಕ್ಷ್ಮಣ್ ಸಾಲ್ವಂಕಾರ್, ಪೃಥ್ವಿರಾಜ್ ಬಲ್ಲಾಳ್, ಎಸ್. ಶಿವಪ್ರಸಾದ್ ಅಡಿಗ, ಡಾ. ಕಾಂತಿ ಹರೀಶ್, ವಿನಯಾ, ಉಡುಪಿ ವಲಯದಿಂದ ಹೆಲೆನ್ ವಿಕ್ಟೋರಿಯಾ ಸಾಲಿನ್ಸ್, ಶಕುಂತಳಾ ದೇವಿ, ಶೈಲಿ ಪ್ರೇಮಾ ಕುಮಾರಿ, ಜ್ಯೋತಿ ಲತಾ ಲೋಬೊ, ಎಸ್. ಸವಿತಾ, ಸೌಮ್ಯ ಅಮೀನ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.