ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಳೆ (ಮೇ 20) ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ತಿಳಿಸಿದರು.
ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ (ಗೃಹ ಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ ಮತ್ತು ಯುವ ನಿಧಿ) ಯಾವುದೇ ಹಣದ ಕೊರತೆಯಿಲ್ಲ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷ 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲು ಸರಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಬಿಪಿನ್ ಚಂದ್ರಪಾಲ್ ನಕ್ರೆ, ಮಹಾಬಲ ಕುಂದರ್ ಇದ್ದರು.












