ಉಡುಪಿ: ಮೇ 18ರಂದು ವಿಪ್ರ ಬಾಂಧವರ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ “ನೃತ್ಯ ಸಂಭ್ರಮ-2025”

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ “ನೃತ್ಯ ಸಂಭ್ರಮ-2025”, ಉದ್ಯಮ ಮೇಳ ಮತ್ತು ಆಹಾರ ಮೇಳವನ್ನು ಇದೇ ಮೇ 18ರಂದು ಉಡುಪಿ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಪ್ರ ಬಾಂಧವರಿಗಾಗಿ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಿದ್ದು, 40 ವರ್ಷದೊಳಗಿನ ಹಾಗೂ 40 ವರ್ಷ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಸಹಿತ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು. ಅದೇ ದಿನ ಬೆಳಿಗ್ಗೆ ವಿಪ್ರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಚಿತ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ರುಚಿ ಶುಚಿಯಾದ ಆಹಾರ ಖಾದ್ಯಗಳ ಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಉದ್ಯಮ ಮತ್ತು ಆಹಾರ ಮೇಳ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ ಎಂದು ಹೇಳಿದರು.

ಜಾನಪದ ನೃತ್ಯ ಸ್ಪರ್ಧೆಯನ್ನು ಶ್ರೀಕ್ಷೇತ್ರ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಲಿದ್ದಾರೆ. ಉದ್ಯಮ ಮಳಿಗೆಗಳನ್ನು‌ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಲಿದ್ದಾರೆ. ಆಹಾರ ಮೇಳಕ್ಕೆ ಪಾಕಶಾಲಾ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ವಾಸುದೇವ ಅಡಿಗ ಚಾಲನೆ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಮಾಜಿ ಅಧ್ಯಕ್ಷ ಚೈತನ್ಯ ಎಂ.ಜಿ., ಕಾರ್ಯಕ್ರಮದ ಸಂಯೋಜಕ‌ ರವಿರಾಜ್, ಪರಿಷತ್ ನ ರಘುಪತಿ ರಾವ್, ವಿಷ್ಣುಪ್ರಸಾದ್ ಪಾಡಿಗಾರ್ ಇದ್ದರು.