ಕಾರ್ಕಳ: ಕಾರ್ಕಳ ಸ್ಪಂದನಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಕಾರ್ಕಳ ಆನೆಕೆರೆ ಸಮೀಪದ ಬಾಡಿಗೆ ಮನೆ ನಿವಾಸಿ ಝುಬೇದಾ(52) ಎಂದು ಗುರುತಿಸಲಾಗಿದೆ. ಇವರು ಸುಮಾರು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮೇ 14ರಂದು ಬೆಳಗ್ಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಕಾರ್ಕಳ ಸ್ಪಂದನಾ ನರ್ಸಿಂಗ್ ಹೊಂಗೆ ಬಂದಿದ್ದರು. ಅಲ್ಲಿ ಝುಬೇದಾ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಮನವಿ ಮಾಡಿದರೂ ವೈದ್ಯರು ಬರಲೇ ಇಲ್ಲ ಎಂದು ಮೃತರ ಮಗಳು ಮುಬೀನಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ನಂತರ ಮಧ್ಯಾಹ್ನ ವೇಳೆ ಡಾ.ನಾಗರತ್ನ ಬಂದು ಕೂಡಲೇ ಆಪರೇಷನ್ ಮಾಡಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಇದೆ ಎಂದು ಹೇಳಿ ಝುಬೇದಾ ಅವರನ್ನು ಆಸ್ಪತ್ರೆಯ ಥಿಯೇಟರ್ಗೆ ಕರೆದುಕೊಂಡು ಹೋದರು.
ಸುಮಾರು ಸಮಯದ ಬಳಿಕ ಆಪರೇಷನ್ ಥಿಯೇಟರ್ನಿಂದ ಹೊರಗಡೆ ಬಂದ ವೈದ್ಯರು, ಝುಬೇದಾ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದರು. ಬಳಿಕ ಆಪರೇಷನ್ ಥಿಯೇಟರ್ನೊಳಗಡೆ ಹೋಗಿ ನೋಡಿದಾಗ ವೈದ್ಯಾಧಿಕಾರಿ ಪರೀಕ್ಷಿಸಿ ಝುಬೇದಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ
ತಿಳಿಸಲಾಗಿದೆ.
ಝುಬೇದಾ ಅವರಿಗೆ ವೈದ್ಯಾಧಿಕಾರಿಯವರು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಹಾಗೂ ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷತನದಿಂದ ಆಪರೇಷನ್ ಮಾಡಿದ ಪರಿಣಾಮ ಮೃತಪಟ್ಟಿರುವುದಾಗಿ ಮುಬೀನಾ ದೂರಿದ್ದಾರೆ. ಘಟನೆಯಿಂದ ಆಕ್ರೋಶಗೊಂಡಿದ್ದ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಝುಬೇದಾ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವಿಷಯ ತಿಳಿದ ಕಾರ್ಕಳ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.












