ಮಂಗಳೂರು: ತುಳು ಪರಿಷತ್ ಆಶ್ರಯದಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಮಂಗಳೂರು ಹೋಟೆಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆದ ತುಳು ಪರಿಷತ್ ಕೇಂದ್ರೀಯ ಸಮಿತಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.
ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾಗಿ ಕಲಾವಿದ, ಸಂಘಟಕ ಸ್ವರ್ಣ ಸುಂದರ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಸ್ವರ್ಣ ಸುಂದರ್ ಅವರು, ಯುವ ಸಮುದಾಯದಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಮತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ತುಳು ಸಮ್ಮೇಳನವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಲಿದೆ. ತುಳು ಭಾಷಿಗರೆಲ್ಲರೂ ಈ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಂದು ಆಶಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನ ಸಮಿತಿ ಅಧ್ಯಕ್ಷ ಪ್ರಭಾಕರ್ ನೀರುಮಾರ್ಗ ಅವರು ಮಾತನಾಡಿ, ವಿದ್ಯಾರ್ಥಿ ತುಳು ಸಮ್ಮೇಳನವು ಅತ್ಯಂತ ಮೌಲಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ತುಳು ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಕಾಲೇಜು ವಿದ್ಯಾರ್ಥಿಗಳೇ ಸಮ್ಮೇಳನದ ಗೋಷ್ಠಿ, ಕಾರ್ಯಕ್ರಮಗಳನ್ನು ನಡೆಸಿಕೊಡುವರು ಎಂದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಅವರು ಮಾತನಾಡಿದರು.
ತುಳು ಪರಿಷತ್ ಉಪಾಧ್ಯಕ್ಷರಾದ ಧರಣೇಂದ್ರ ಕುಮಾರ್, ಪ್ರೊ.ವಿನುತಾ ರೈ, ಮಮತಾ ಡಿ.ಎಸ್.ಗಟ್ಟಿ, ಶಿವಾನಂದ ಕರ್ಕೇರಾ, ಡಾ.ವಾಸುದೇವ ಬೆಳ್ಳೆ, ಪ್ರಶಾಂತ್ ಕಾರಂತ್, ವಾಣಿ ರಾಜಗೋಪಾಲ್, ಪಲ್ಲವಿ ಕಾರಂತ್ ಸಭೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿ ತುಳು ಸಮ್ಮೇಳನದ ವಿವಿಧ ಕಾರ್ಯಕ್ರಮ ಸ್ವರೂಪಗಳ ಬಗ್ಗೆ ಚರ್ಚೆಯಲ್ಲಿ ತುಳು ಪರಿಷತ್ ಸದಸ್ಯರಾದ ಸುಭಾಶ್ಚಂದ್ರ ಕಣ್ವತೀರ್ಥ, ಗೋಪಾಲ್ ಅಂಚನ್, ಅಕ್ಷತಾ ಶೆಟ್ಟಿ , ಶೋಭಾ ಶೆಟ್ಟಿ , ರಮೇಶ್ ಮಂಚಕಲ್, ಬಾಬು ಪಾಂಗಾಳ, ಇಸ್ಮಾಯಿಲ್ ಪೆರಿಂಜೆ, ಸುದರ್ಶನ್, ಅಮಿತಾ ಆಳ್ವಾ, ಮಣಿ ರೈ, ಅವಿನಾಶ್, ಹರೀಶ್, ವಸಂತ್, ದಿನೇಶ್, ಜಯಲಕ್ಷ್ಮೀ ಶೆಟ್ಟಿ, ಭರತೇಶ್ ಮತ್ತಿತರರು ಭಾಗವಹಿಸಿದರು.