ಉಡುಪಿ: ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುದ್ಧ ಜಯಂತಿಯ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ಎಲ್ಲಾ 150 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ವಂದನೆ- ಮೈತ್ರಿ ಧ್ಯಾನ: ನಂತರ ಹಾವಂಜೆಯಲ್ಲಿರುವ ಬೋಧಿಸತ್ವ ಬುದ್ಧ ವಿಹಾರದಲ್ಲಿ ಧಮ್ಮಾಚಾರಿ ಶಂಭು ಸುವರ್ಣ ನೇತೃತ್ವದಲ್ಲಿ ಬುದ್ಧ ವಂದನೆ, ಧ್ಯಾನ ಮತ್ತು ಮೈತ್ರಿ ಧ್ಯಾನ ಜರಗಿತು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನೇಜಾರಿನ ಸ್ಪಂದನ ವಿಶೇಷಚೇತನ ಹಾಗೂ ಸಾಲ್ಮರದ ವಿಶೇಷ ಚೇತನ ಮಕ್ಕಳೊಂದಿಗೆ ಸಹಭೋಜನ ಮಾಡಲಾಯಿತು.
ಕೊಡವೂರಿನ ಕಮಲ ಸುವರ್ಣ, ಪೆರಂಪಳ್ಳಿಯ ಬೌದ್ಧ ಚಿಂತಕ ಸೋಮಪ್ಪ ಎಚ್.ಜಿ. ಮನೆಯಲ್ಲಿ ಬುದ್ಧವಂದನೆ ಮಾಡಲಾಯಿತು. ಶಿವಪುರದ ಗೋಪಾಲ್ ಮತ್ತು ವಸಂತಿ ದಂಪತಿ, ಕುಕ್ಕೆಹಳ್ಳಿಯ ಸಂಜೀವ ಮತ್ತು ಸುರೇಖಾ ದಂಪತಿ, ಚೇರ್ಕಾಡಿಯ ಜಾರ್ಜೆಡ್ಡಿನ ಮುತ್ತಕ್ಕ ರಾಮಣ್ಣ, ಹೆಬ್ರಿ ತಾಲೂಕಿನ ಪಡುಕುಡೂರಿನ ನಾಥು ಮತ್ತು ಬೇಬಿ, ಹೇರೂರಿನ ಸದಾಶಿವ ಶೆಟ್ಟಿ ಮತ್ತು ವಿನೋದ ಶೆಡ್ತಿ ದಂಪತಿ, ಉಪ್ಪೂರಿನ ಸರಸ್ವತಿ ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ ಆಚರಿಸಲಾಯಿತು.
ಬುದ್ಧ ಜಯಂತಿ: ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ದೇವರಾಜ್, ಶಂಭು ಸುವರ್ಣ, ಫಕೀರಪ್ಪ ಎಂ., ಗೋಪಾಲ್ ಶಿವಪುರ, ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಪ್ರಕಾಶ್ ಬಿಬಿ, ಸುಜಾತ, ಪೃಥ್ವಿ ಮುಂತಾದವರು ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಭೋದಿಸತ್ವ ಬುದ್ಧ ಫೌಂಡೇಶನ್‌ನ ಅಧ್ಯಕ್ಷ ಶೇಖರ್ ಹಾವಂಜೆ ವಹಿಸಿದ್ದರು.












