ಉಡುಪಿ: ಹಿರಿಯಡ್ಕದ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ರಥೋತ್ಸವ, ಸಿರಿಜಾತ್ರಾ ಮಹೋತ್ಸವ ಇದೇ ಮೇ 15ರಂದು ನಡೆಯಲಿದ್ದು, ಈ ಪ್ರಯುಕ್ತ ವಾಹನಗಳಿಗೆ ತಾತ್ಕಾಲಿಕ ಬದಲಿ ಮಾರ್ಗದ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಮೇ15ರಂದು ಬೆಳಗ್ಗೆ 10ಗಂಟೆಯಿಂದ ಹಿರಿಯಡ್ಕ ಶ್ರೀವೀರಭದ್ರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮನ್ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಲಿದ್ದು, ಸಂಜೆ 6:30ರಿಂದ ದೇವಸ್ಥಾನದ ಮುಂಭಾಗದಿಂದ ಹಿರಿಯಡ್ಕ- ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ಕೋಟ್ನಕಟ್ಟೆ ತನಕ ಮೆರವಣಿಗೆ ಸಾಗಲಿದೆ. ಹೀಗಾಗಿ ರಥೋತ್ಸವದ ಪ್ರಯುಕ್ತ ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.
ಈ ಪ್ರಯುಕ್ತ ಮೇ 15ರಂದು ಸಂಜೆ 4ರಿಂದ ರಾತ್ರಿ 10ಗಂಟೆಯವರೆಗೆ ಕಾರ್ಕಳ ಹಿರಿಯಡ್ಕ ರಾಜ್ಯ ಹೆದ್ದಾರಿಯ ಹಿರಿಯಡ್ಕ ಜಂಕ್ಷನ್‌ನಿಂದ ಕೋಟ್ನಕಟ್ಟೆ ಜಂಕ್ಷನ್ ತನಕ ವಾಹನ ಸಂಚಾರವನ್ನು ನಿಷೇಧಿಸಿ ತಾತ್ಕಾಲಿಕವಾಗಿ ಈ ಕೆಳಗಿನ ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಮುತ್ತೂರು ಕ್ರಾಸ್, ಮುತ್ತೂರು ಪಡ್ಡಂ, ಕಾಜರಗುತ್ತು, ಓಂತಿಬೆಟ್ಟು ಮಾರ್ಗವಾಗಿ ಉಡುಪಿಗೆ ಹೋಗಬೇಕು, ಉಡುಪಿ ಕಡೆಯಿಂದ ಬೈಲೂರು, ಕಾರ್ಕಳ ಕಡೆಗೆ ಹೋಗುವ ವಾಹನಗಳು ಪ್ರಭು ರೋಸ್ ಕಿಚನ್ ಡೈವರ್ಷನ್ ಬಳಿ ಮಾರ್ಗ ಬದಲಿಸಿ ಪಡ್ಡಂ, ಮುತ್ತೂರು, ಮುತ್ತೂರು ಕ್ರಾಸ್ ಮಾರ್ಗವಾಗಿ ಕಾರ್ಕಳ ಬೈಲೂರು ಕಡೆಗೆ ಹೋಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.












