ಉಡುಪಿ: ಕರಾವಳಿಯಲ್ಲಿ ಮೀನಿಗೆ ಬರ; ಬೆಲೆ ಸಿಕ್ಕಾಪಟ್ಟೆ ದುಬಾರಿ.!

ಉಡುಪಿ: ಬೇಸಗೆಯ ತಾಪ ಎಲ್ಲೆಡೆ ಪರಿಣಾಮ ಬೀರುತ್ತಿದ್ದು, ಮೀನುಗಾರಿಕಾ ವಲಯಕ್ಕೂ ಬಿಸಿ ತಟ್ಟಿದೆ. ಬಿಸಿಲಿನ ಬೇಗೆಗೆ ತೀರದತ್ತ ಮೀನುಗಳು ಬಾರದೇ ಇರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಇದರಿಂದ ಬಹುಬೇಡಿಕೆಯ ಮೀನುಗಳ ದರ ದುಬಾರಿಯಾಗಿದೆ.

ಕರಾವಳಿಯಲ್ಲಿಯೇ ಎರಡು- ಮೂರು ದಿನಗಳ ಹಿಂದೆ ಅಂಜಲ್ ಕೆಜಿಗೆ ಬರೋಬ್ಬರಿ 1,800 ರೂ.ಗೆ ತಲುಪಿತ್ತು. ಇದುವರೆಗಿನ ಗರಿಷ್ಠ ಬೆಲೆಯಿದು. ಸದ್ಯ ಮಾರುಕಟ್ಟೆಯಲ್ಲಿ 1,400-1,500 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಳಿ ಪಾಂಫ್ರೆಟ್ ಕೆಜಿಗೆ 1,500 ರೂ. ಇದ್ದು, ಇದೂ ಇದುವರೆಗಿನ ದಾಖಲೆಯಾಗಿದೆ.

3 ವರ್ಷಗಳ ಹಿಂದೆ ಅಂಜಲ್‌ಗೆ 1 ಸಾವಿರ ರೂ. ಇದ್ದರೆ, ಅದೇ ದುಬಾರಿ. ಆದರೆ ಈಗ 1,500 ರೂ. ಗಡಿಯೂ ದಾಟಿ 1,700-1,800 ರೂ.ಗೆ ತಲುಪಿರುವುದು ಅಂಜಲ್‌ಗೆ ಬರದ ಸಂಕೇತ. ಇನ್ನು ಬಿಳಿ ಪಾಂಫ್ರೆಟ್‌ಗೆ 700-800 ರೂ. ಆಗಿದ್ದರೆ ಅದುವೇ ಗರಿಷ್ಠ ಆಗಿತ್ತು. ಆದರೆ ಈಗ 1300-1400 ರೂ. ವರೆಗೆ ತಲುಪಿದೆ. 350-400 ರೂ. ಇರುತ್ತಿದ್ದ ಕಪ್ಪು ಪಾಂಫ್ರೆಟ್‌ಗೆ ಈಗ 750 – 800 ರೂ. ಆಗಿದೆ. ಇನ್ನು ಸಣ್ಣಪುಟ್ಟ ಮೀನುಗಳೂ ಕೈಗೆ ಎಟುಕುತ್ತಿಲ್ಲ. ನಿತ್ಯ ಮೀನು ಸೇವಿಸುವ ಮಂದಿ,ಉರಿಬಿಸಿಲಿಗೆ ಮೀನು ಸಿಕ್ಕಿದರೂ ರುಚಿಯೇ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಮೀನು ಪ್ರಿಯರಿಗೆ ಸಾಕಷ್ಟು ತೊಂದರೆಯಾಗಿದೆ.