ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(KCCI)ಯ ಒಡಂಬಡಿಕೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಯ ಅಂತರವನ್ನು ಕಡಿಮೆ ಮಾಡಲು ಸಂಶೋಧನೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳನ್ನು ಉತ್ತೇಜಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ
ಯೋಜನೆಗಳನ್ನು, ಉದ್ಯಮ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಮತ್ತು ವಿವಿಧ ಕೈಗಾರಿಕೆಗಳ ಬಗ್ಗೆ ತಿಳುವಳಿಕೆಯನ್ನು ಕಾಲಕಾಲಕ್ಕೆ ಒದಗಿಸುವ ಜವಾಬ್ದಾರಿಯನ್ನು ವಿದ್ಯಾಸಂಸ್ಥೆಯು ನಿರ್ವಹಿಸುತ್ತಿದೆ.

ಈ ಉದ್ದೇಶವನ್ನು ಇನ್ನೂ ಬಲಪಡಿಸುವ ಸಲುವಾಗಿ ದಿನಾಂಕ 05 ಮೇ 2025 ರಂದು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ
ವಿದ್ಯಾಲಯ, ಬಂಟಕಲ್, ಉಡುಪಿ ಮತ್ತು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು, ಇವರ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಈ
ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾದ ಡಾ. ರಾಧಕೃಷ್ಣ ಐತಾಳ್ ಇವರ ಉಪಸ್ಥಿತಿಯಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್
ಇಂಡಸ್ಟ್ರಿ, ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಆನಂದ್ ಜಿ ಪೈ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ
ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾದ ಡಾ. ರಾಧಕೃಷ್ಣ
ಐತಾಳ್ ಇವರು ಮಾತನಾಡಿ ಶೈಕ್ಷಣಿಕ ತಿಳುವಳಿಕೆಗಳು
ಮತ್ತು ಉದ್ಯಮಿಗಳ ನಿರೀಕ್ಷೆಯ ನಡುವಿನ ಅಂತರದ
ಬಗ್ಗೆ ತಿಳಿಸಿದರು. ಇಂತಹ ಒಪ್ಪಂದಗಳು ವಿದ್ಯಾರ್ಥಿಗಳನ್ನು
ಉದ್ಯಮಿಗಳನ್ನಾಗಿ ಸಿದ್ಧಗೊಳಿಸಲು ಸಹಾಯಕವಾಗಿರುವುದಲ್ಲದೆ ಇಂಟರ್ನ್ಶಿಪ್‌ಗಳು, ಯೋಜನಾ
ಕಾರ್ಯಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ
ನೀಡುವ ಕೆಲಸಗಳನ್ನು ಸುಗಮಗೊಳಿಸುವ ಜೊತೆಗೆ
ತಂತ್ರಜ್ಞಾನ ಸಮಾವೇಶಗಳು, ಎಂಜಿನಿಯರಿಂಗ್‌ನಲ್ಲಿ
ಮಹಿಳೆಯರಿಗೆ ಬೆಂಬಲ ಮತ್ತು ಅತಿಥಿ ಉಪನ್ಯಾಸಗಳಂತಹ
ಉಪಕ್ರಮಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ
ಎಂದರು.

ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ,
ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಆನಂದ್ ಜಿ ಪೈ
ಇವರು ಮಾತನಾಡಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು, ವ್ಯಾಪಾರ ಮತ್ತು ವ್ಯಾಪಾರ ಸಮುದಾಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದು ತಮ್ಮ ಕೈಗಾರಿಕಾ ಸಂಸ್ಥೆಯ ಧ್ಯೇಯ ಎಂದರು.

ಈ ನೂತನ ಆವಿಷ್ಕಾರಗಳ ಬಗ್ಗೆ ಶಿಬಿರ ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಲು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು.