ಉತ್ತರಪ್ರದೇಶ: ಮದುವೆ ಸಮಾರಂಭದಲ್ಲಿ ತಂದೂರಿ ರೊಟ್ಟಿಗಾಗಿ ಜಗಳ -ಇಬ್ಬರ ಸಾವು

ಉತ್ತರ ಪ್ರದೇಶ: ಮದುವೆ ಸಮಾರಂಭವೊಂದರ ಊಟದ ಸಮಯದಲ್ಲಿ ತಂದೂರಿ ರೊಟ್ಟಿಗಾಗಿ ಯುವಕರಿಬ್ಬರ ನಡುವೆ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಕಳೆದ ಶನಿವಾರ ಮೇ.3 ರಂದು ನಡೆದಿದೆ.

ಮೃತರನ್ನು ರವಿ ಕುಮಾರ್ ಅಲಿಯಾಸ್ ಕಲ್ಲು (18) ಹಾಗೂ ಆಶಿಶ್ ಕುಮಾರ್ (17) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ:
ಶನಿವಾರ ಸಂಜೆ (ಮೇ.3) ಬಲಭದ್ರಾಪುರ ಗ್ರಾಮದ ನಿವಾಸಿ ರಾಮಜೀವನ್ ವರ್ಮಾ ಅವರ ಮಗಳ ವಿವಾಹ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಬಂಧುಗಳು, ಸ್ನೇಹಿತರು ಎಂದು ಹೇಳಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಜೊತೆಗೆ ರವಿ ಕುಮಾರ್ ಹಾಗೂ ಆಶಿಶ್ ಕುಮಾರ್ ಕೂಡ ಭಾಗಿಯಾಗಿದ್ದರು. ಮದುವೆ ಸಮಾರಂಭ ಮುಗಿದು ಇನ್ನೇನು ಊಟ ಶುರು ಆಗುವ ಹೊತ್ತಿಗೆ ಇಬ್ಬರೂ ಊಟದ ಹಾಲ್ ಕಡೆ ಧಾವಿಸಿದ್ದಾರೆ. ಈ ವೇಳೆ ತಂದೂರಿ ರೊಟ್ಟಿಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಇದನ್ನು ನೋಡಿದ ಅಲ್ಲಿದ್ದವರು ಯುವಕರು ಸುಮ್ಮನೆ ಜಗಳ ಮಾಡುತ್ತಿದ್ದಾರೆ ಎಂದು ಅವರ ಪಾಡಿಗೆ ಅವರು ಊಟಕ್ಕೆ ತೆರಳಿದ್ದಾರೆ. ಆದರೆ ಈ ಯುವಕರ ಜಗಳ ವಿಕೋಪಕ್ಕೆ ತಿರುಗಿ ನೂಕಾಟ ತಳ್ಳಾಟ ನಡೆದು ಬಳಿಕ ಅಲ್ಲಿದ್ದ ಮರದ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರವಿ ಹೊಡೆದ ಪೆಟ್ಟಿಗೆ ಆಶಿಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೆ ರವಿ ಕೂಡಾ ಗಂಭೀರ ಗಾಯಗೊಂಡಿದ್ದ ಕೂಡಲೇ ಅಲ್ಲಿದ್ದವರು ಗಂಭೀರ ಗಾಯಗೊಂಡಿದ್ದ ರವಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು ಇಬ್ಬರ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮದುವೆ ಮನೆಯವರು ಕಂಗಾಲು:
ಇನ್ನು ಮದುವೆಯ ಸಂಭ್ರಮದಲ್ಲಿದ್ದ ಮನೆಯವರಿಗೆ ವಿಚಾರ ತಿಳಿಯುತ್ತಿದ್ದಂತೆ ಶಾಕ್ ಗೆ ಒಳಗಾಗಿದ್ದಾರೆ, ತಮ್ಮ ಸಮಾರಂಭದಲ್ಲಿ ಈ ರೀತಿ ನಡೆದಿದೆ ಎಂಬುದು ಅವರ ಗಮನಕ್ಕೆ ಬಂದಿರಲಿಲ್ಲ ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವಿಚಾರ ಮದುವೆ ಮನೆಯವರಿಗೆ ಗೊತ್ತಾಗಿದೆ ಇದನ್ನು ಕೇಳಿದ ಮದುವೆ ಮನೆಯವರು ಶಾಕ್ ಗೆ ಒಳಗಾಗಿದ್ದಾರೆ.