ಉಡುಪಿ: ದೇಶದ ಜನತೆಯನ್ನು ಒಗ್ಗೂಡಿಸುವ ಶಕ್ತಿ ಹಿಂದಿ ಭಾಷೆಗೆ ಇದೆ ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿ ಪುರೋಬಿ ಎ. ಭಂಡಾರಿ ಹೇಳಿದರು.
ಉಡುಪಿ ಹಿಂದಿ ಪ್ರಚಾರ ಸಮಿತಿ ಆಶ್ರಯದಲ್ಲಿ ನಗರದ ಟಿ.ಎ. ಪೈ ಹಿಂದಿ ಭವನದಲ್ಲಿ ಶನಿವಾರ ಆಯೋಜಿಸಿದ ಹಿಂದಿ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿ ವಿಶ್ವದ ನಾಲ್ಕನೇ ಭಾಷೆಯಾಗಿ ಗುರುತಿಸಿಕೊಂಡಿದೆ. ದೇಶದಲ್ಲಿ ಇಂಗ್ಲಿಷ್ ಮಾತನಾಡಲು ಬಾರದವರು ನಂತರ ಆಯ್ಕೆ ಮಾಡಿಕೊಳ್ಳುವುದೇ ಹಿಂದಿ ಭಾಷೆ. ಇದು ಹೃದಯದ ಭಾಷೆಯಾಗಿದ್ದು, ಅದನ್ನು ಮಾತನಾಡುವ ಮೂಲಕ ಅಭಿವ್ಯಕ್ತಿಗೊಳಿಸಬೇಕು ಎಂದರು.
ಪ್ರಸ್ತುತ ಭಾಷಾ ಸರ್ವೇ ನಡೆದರೆ ಹಿಂದಿ ದೇಶದ ಏಕೈಕ ಭಾಷೆಯಾಗಿ ಹೊರಹೊಮ್ಮಲಿದೆ. ಆದರೆ ಇದಕ್ಕೆ ಆಡಳಿತ ವರ್ಗ ಮನಸ್ಸು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ, ವರಿಷ್ಠ ಹಿಂದಿ ಪ್ರಚಾರಕ ಗೋಪಾಲ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವ ಕಾರ್ಯದರ್ಶಿ ಡಾ. ಎಸ್.ಆರ್. ಶೇಟ್ ಸ್ವಾಗತಿಸಿದರು.
ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಮುಕ್ತಾ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.