ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಸೆಣಸಾಡಲಿವೆ. ಆದರೆ, ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿ ಎದುರಾಗಿದೆ.
ಬೆಂಗಳೂರಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಕೂಡ ನಗರದಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದೆ. ಸಂಜೆ ಮಳೆ ಸುರಿಯುವ ಸಾಧ್ಯತೆ ಇದೆ. ಶುಕ್ರವಾರದ ಅಭ್ಯಾಸದ ಶಿಬಿರಕ್ಕೂ ಮಳೆ ಅಡ್ಡಿಪಡಿಸಿತ್ತು. ಶನಿವಾರ ಕೂಡ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.
ಕಳೆದ ತಿಂಗಳು ತವರಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಹ್ಯಾಟ್ರಿಕ್ ಮುಖಭಂಗ ಅನುಭವಿಸಿತ್ತು. ಆಗ ಕೂಡ ಬೆಂಗಳೂರಲ್ಲಿ ಮಳೆಯಾಗಿತ್ತು. ಪರಿಣಾಮ ಓವರ್‌ಗಳನ್ನು ಕಡಿತಗೊಳಿಸಿ ತಡವಾಗಿ ಪಂದ್ಯ ನಡೆಸಲಾಗಿತ್ತು. ಮಳೆ ಬಾದಿತ ಪಂದ್ಯದಲ್ಲಿ ಆರ್‌ಸಿಬಿ ಸೋತಿತ್ತು.
ಆರ್‌ಸಿಬಿ ಈ ಪಂದ್ಯ ಗೆದ್ದರೆ ಪ್ಲೇ-ಆಫ್ ಸ್ಥಾನ:
ಆಡಿರುವ 10 ಪಂದ್ಯಗಳ ಪೈಕಿ 7 ರಲ್ಲಿ ಗೆದ್ದಿರುವ ಆರ್‌ಸಿಬಿ ಪ್ಲೇ-ಆಫ್ ಸನಿಹದಲ್ಲಿದೆ. ಈ 2ನೇ ಪಂದ್ಯದಲ್ಲೂ ಆರ್‌ಸಿಬಿ ಗೆದ್ದರೆ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತವಿದೆ. 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. 10 ಪಂದ್ಯಗಳ ಪೈಕಿ ಚೆನ್ನೈ ಕೇವಲ 2ರಲ್ಲಿ ಗೆಲುವು ಸಾಧಿಸಿದೆ. 8 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ವಿರಾಟ್ ಕೊಹ್ಲಿ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಎದುರಾಳಿಗಳಿಗೆ ಕಠಿಣ ಎನಿಸಿದ್ದಾರೆ.












