ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಚಟುವಟಿಕೆ ಉದ್ಘಾಟನೆ:

ಕಾರ್ಕಳ: ಜೀವನದಲ್ಲಿ ಏನ್ನಾದರೂ ಸಾಧನೆ ಮಾಡಲು ಪ್ರೇರಣೆ ಮುಖ್ಯವಾಗುತ್ತದೆ. ಪ್ರತಿಯೊಂದು ವಿಷಯಗಳಲ್ಲೂ ಪ್ರೇರಣೆಯನ್ನು ಕಾಣಬೇಕು ಆಗ ಮಾತ್ರ ಸಾಧಿಸುವ ಹುಮ್ಮಸ್ಸು ಬರುತ್ತದೆ ಎಂದು ನಟ, ಕಲಾವಿದ ಪೃಥ್ವಿ ಅಂಬರ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಪ್ರಸ್ತುತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಲೆ ಇದ್ದವನು ಎಲ್ಲಿ ಬೇಕಾದರೂ ಬದುಕಬಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ ಆದರೆ ಅದನ್ನು ಹೊರ ತರುವ ರೀತಿ ತಿಳಿದಿರಬೇಕು. ಲಲಿತಕಲಾ ಸಂಘಗಳು ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಹೊರತರುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಇದು ಸಾಂಸ್ಕೃತಿಕ ಮನೋಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯ ಮಾಡುತ್ತದೆ. ಕಲೆಯ ಜೊತೆಗೆ ಸೃಜನ ಶೀಲತೆಯಿರಬೇಕು. ಆಗ ಮನೋರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಅಡಳಿತ ಮಂಡಳಿ ಅಧ್ಯಕ್ಷ ಸಿ.ಎ ಶಿವಾನಂದ ಪೈ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಹಿಂಜರಿಕೆಯನ್ನು ಬಿಟ್ಟು ಇಂತಹ ವೇದಿಕೆಗಳನ್ನು ಉಪಯೋಗಿಸಿಕೊಂಡಲ್ಲಿ ಜೀವನದಲ್ಲಿ ಮುಂದೆ ಬರಲು ಸಹಾಯವಾಗುತ್ತದೆ. ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರು ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸೂಕ್ತ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡರೆ ತಮ್ಮ ಕ್ಷೇತ್ರದಲ್ಲಿ ಮುಂದುವರೆಯಲು, ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ .ಮಂಜುನಾಥ್ ಎ ಕೋಟ್ಯಾನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ, ಸರಿಗಮಪ ಖ್ಯಾತಿಯ ನಿಹಾಲ್ ತಾವ್ರೋ, ಲಲಿತಕಲಾ ಸಂಘದ ವಿದ್ಯಾರ್ಥಿ ಸಂಯೋಜಕರುಗಳಾದ ಶ್ರವಣ್, ವರ್ಷ, ದಿವ್ಯರಾಣಿ, ಶ್ರೀನಿಧಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಲಲಿತಾ ಕಲಾ ಸಂಘದ ಸಂಯೋಜಕ ಹಾಗೂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಭಾಗ ಮುಖ್ಯಸ್ಥ ನಂದಕಿಶೋರ್ ಸ್ವಾಗತಿಸಿದರು, ವಿದ್ಯಾರ್ಥಿ ನವೀನ್ ಭಟ್ ನಿರೂಪಿಸಿದರು.