ಉಡುಪಿ:ಶ್ರೀ ಶಂಕರ ಜಯಂತಿಯ ಪ್ರಯುಕ್ತ ಶ್ರೀ ಎಲ್ಲೂರು ಲಕ್ಷ್ಮೀನಾರಾಯಣ ರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ವತಿಯಿಂದ ಎಂಟನೇ , ಒಂಬತ್ತನೇ, ಹತ್ತನೇ ಹನ್ನೊಂದನನೇ ಹಾಗೂ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ಶಂಕರಾಚಾರ್ಯರ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕವಾಗಿ ಶಾಲಾ ಬ್ಯಾಗ್ ಸಹಿತ ಪುಸ್ತಕ, ನೀರಿನ ಸ್ಟೀಲ್ ಬಾಟಲ್, ಕಂಪಾಸ್ ಬಾಕ್ಸ್ ಉಳ್ಳ ರೂ 1000 ಮೌಲ್ಯದ ಕಿಟ್ಟನ್ನು ವಿತರಿಸಲಾಯಿತು.

ಈ ಬಗ್ಗೆ ಶ್ರೀಶಂಕರ ಜಯಂತಿ ಆಚರಣೆಯ ಸಮಾರಂಭವು ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಕುಂಜಿ ಬೆಟ್ಟು ಉಡುಪಿ , ಶ್ರೀ ಶಂಕರ ತತ್ವ ಪ್ರಸಾರ ಸಮಿತಿ ಉಡುಪಿ ಇವರ ಜಂಟಿ ಆಯೋಜನೆಯಲ್ಲಿ ಶ್ರೀ ಶಾರದಾ ಮಂಟಪ ಉಡುಪಿಯಲ್ಲಿ ತಾರೀಕು 02-05- 2025 ರಂದು ಜರಗಿತು .ಮುಖ್ಯ ಅತಿಥಿಗಳಾಗಿ ಸಂಸ್ಕೃತ ವಿದ್ವಾಂಸ ಹಾಗೂ ಖ್ಯಾತ ಯೋಗ ಚಿಕಿತ್ಸಕ ಶ್ರೀ ಹೆಚ್ ಗಣಪತಿ ಜೋಯಿಸ ರವರು ಆಗಮಿಸಿದ್ದರು. ಅವರು ಶ್ರೀಶಂಕರಾಚಾರ್ಯರ ಜೀವನ ಚರಿತ್ರೆ ಹಾಗೂ ಅವರ ವಿಶೇಷತೆಯನ್ನು ಸರಳವಾಗಿ ವಿವರಿಸಿದರು ಶೃಂಗೇರಿ ಶ್ರೀ ಶಾರದಾ ಪೀಠದ ಧರ್ಮಾಧಿಕಾರಿಗಳಾದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿ ಇವರು ಆಗಮಿಸಿ ಮಹಾತ್ಮರ ಜೀವನ ಚರಿತ್ರೆಯನ್ನು ಆಲಿಸುವುದು ಹಾಗೂ ಓದುವುದು ಸಜ್ಜನಿಕೆಯ ಲಕ್ಷಣ. ಆ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹಿತನುಡಿಯನ್ನಿತ್ತರು.

ಡಾ.ವಿದ್ಯಾ ಎಸ್ ರಾವ್ ನೇತೃತ್ವದ ಶ್ರೀ ಶಾರದಾ ಭಜನಾ ತಂಡದಿಂದ ಷಣ್ಮತ ಸ್ಥಾಪಕರಾದ ಶ್ರೀ ಆದಿಶಂಕರಚಾರ್ಯರಿಂದ ವಿರಚಿತವಾದ ಗಣಪತಿ, ಸುಬ್ರಹ್ಮಣ್ಯ, ದೇವಿ ,ಆದಿತ್ಯ ಶ್ರೀಹರಿ ಹಾಗೂ ಈಶ್ವರನ ಆರು ಸ್ತೋತ್ರಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು. ದೀಪ ಪ್ರಜ್ವಲನೆಯಿಂದ ಆರಂಭಗೊಂಡ ಈ ಸಮಾರಂಭದಲ್ಲಿ ಐದು ಜನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು.
ಮೂಡಬಿದ್ರೆಯ ಕುಮಾರಿ ರಾಜಶ್ರೀ ಪ್ರಥಮ ಬಹುಮಾನವನ್ನು, ಉಡುಪಿಯ ಭವಿಶ್ ಕುಮಾರ್ ದ್ವಿತೀಯ ಸ್ಥಾನವನ್ನು, ಪಟ್ಟದ ಮುರಾರ್ಜಿ ದೇಸಾಯಿ ಶಾಲೆಯ ಖುಷಿ ಎಂ ಅಂಗಡಿ ತೃತೀಯ ಸ್ಥಾನವನ್ನು ಪಡೆದುಕೊಂಡರು . ದೀಪೇಶ್ ಶೆಣೈ ಹಾಗೂ ಸುಪ್ರಿಯ ಇವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು. ನಂತರ ಸ್ವದ್ಯೆಯಲ್ಲಿ ಭಾಗವಹಿಸಿದ ನೂರು ಜನ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ನೀರಿನ ಬಾಟಲಿ ಪುಸ್ತಕ ಗಳಿರುವ ಕಿಟ್ಟನ್ನು ನೀಡಲಾಯಿತು. ಇಂಚರ ಸರ್ಜಿಕಲ್ ಕ್ಲಿನಿಕ್ ನ ವೈದ್ಯರಾದ ಡಾ. ವೈ ಸುದರ್ಶನ್ ರಾವ್ ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಟ್ರಸ್ಟ್ ನ ಧರ್ಮದರ್ಶಿಗಳಾದ ಶ್ರೀ ವೈ ಶಾಂತಿನಾಥ ರಾವ್ ಹಾಗೂ ಶ್ರೀಶಂಕರ ತತ್ವ ಪ್ರಸಾರ ಸಮಿತಿಯ ಸಂಚಾಲಕರಾದ ಶ್ರೀ ವಿಶ್ವನಾಥ್ ಶಾನುಭಾಗ್ ಸ್ಥಾನಿಕ ಬ್ರಾಹ್ಮಣ ಸಂಘದ ಉಪಾಧ್ಯಕ್ಷರುಗಳಾದ ಶ್ರೀ ಸುರೇಶ ಶಾನುಬಾಗ್ ಹಾಗೂ ಶ್ರೀ ಉಮೇಶ್ ರಾವ್ , ಕೋಶಾಧಿಕಾರಿ ಶ್ರೀ ವಿನೋದ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಭಾಕರ ಭಂಡಿಯವರು ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದಗಳನ್ನು ನೀಡಿದರು.












