ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹುಕೋಟಿ ಹಗರಣ: ರೈತಸಂಘದ 49 ದಿನಗಳ ಅಹೋರಾತ್ರಿ ಧರಣಿ ಅಂತ್ಯ

ಬ್ರಹ್ಮಾವರ: ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸರಕಾರದ ಪೂರ್ವಾನುಮತಿಗೆ ಬಂದ 3 ತಿಂಗಳಿನಲ್ಲಿ ಒಪ್ಪಿಗೆ ಅಥವಾ ತಿರಸ್ಕರಿಸಬೇಕೆಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಕೂಡ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿರುವ ಕಾರ್ಯಾಂಗದ ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆ, ಜನ ರಿಂದ ಆರಿಸಿ ಹೋದ ಜನಪ್ರತಿನಿಧಿಗಳು ತೋರಿದ ಅಸಡ್ಡೆ ನಿಜಕ್ಕೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾರಕವಾಗಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ,ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಖೇಧ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಹುಕೋಟಿ ವಂಚನೆಯ ತನಿಖೆಯಲ್ಲಿ ವಿಳಂಬ ನೀತಿ ಖಂಡಿಸಿ, ಉಡುಪಿ ಜಿಲ್ಲಾ ರೈತಸಂಘದ ವತಿಯಿಂದ ಸಕ್ಕರೆ ಕಾರ್ಖಾನೆ ಮುಂಭಾಗ ಕಳೆದ 49 ದಿನ ಗಳಿಂದ ನಡೆದ ಅಹೋರಾತ್ರಿ ಧರಣಿಯನ್ನು ಕೊನೆಗೊಳಿಸಿ ಧರಣಿಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಲು ಶುಕ್ರವಾರ ಸಂಜೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರದ ಹಣ ಲೂಟಿಯಾದಾಗ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಬೇರೆ ಬೇರೆ ಸ್ತರಗಳಲ್ಲಿ ಶಾಸಕಾಂಗ, ಸರಕಾರದ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ ರೈತರ ಪರವಾಗಿ ಹೋರಾಡಲು ರೈತ ಸಂಘ ಹೆಜ್ಜೆಯಿಟ್ಟಿತು. ಪಕ್ಷಾತೀತವಾಗಿ ಹಲವರು ಬೆಂಬಲ ನೀಡಿದರೂ ಕೂಡ ವಿಧಾನಪರಿಷತ್ ಸದಸ್ಯರಿಬ್ಬರನ್ನು ಹೊರತುಪಡಿಸಿ ಜಿಲ್ಲೆಯ ಶಾಸಕರು ಭಾವನೆ ವ್ಯಕ್ತಪಡಿಸದೇ ಇರುವುದು ಜನಪ್ರತಿನಿಧಿಗಳಿಗೆ ಶೋಭೆಯಲ್ಲ ಎಂದವರು ಅಸಮಧಾನ ಸೂಚಿಸಿದರು.

ಜನರ ಭಾವನೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಬದಲಾಗಬೇಕು. ಇಷ್ಟು ವರ್ಷಗಳಲ್ಲಿ ರೈತರಿಗೆ ನ್ಯಾಯ ಒದಗಿಸಲಾಗದ ಯಾವುದೇ ಸರಕಾರಗಳ ಜನಪ್ರತಿನಿಧಿಗಳು ಇದಕ್ಕೆ ಬಾಧ್ಯರು. ಬಹುಕೋಟಿ ವಂಚನೆಯಂತಹ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಕರ್ತವ್ಯ ನಿರ್ವಹಿಸಬೇಕಿದ್ದ ಆಡಳಿತ ವರ್ಗ ಕೆಲಸ ಮಾಡದಿರುವುದು ದುರಂತ. ಜನಸಾಮಾನ್ಯರಿಗೊಂದು, ಆಳುವರಿಗೊಂದು ನ್ಯಾಯ ಎಂಬಂತಾಗಿದ್ದು ಈ ಅವ್ಯವಸ್ಥೆ ಬದಲಾಗಬೇಕು ಎಂದರು.

ಉಡುಪಿ ಜಿಲ್ಲಾ ರೈತ ಸಂಘ ಯಾವುದೇ ರಾಜಕೀಯ ಸಂಘಟನೆಯಲ್ಲ. ಜನರ ನೋವು, ಭಾವನೆಗಳು, ಸಮಸ್ಯೆಗಳನ್ನು ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಸಂಘ ಮಾಡುತ್ತಿದೆ. ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ದರೋಡೆಯಾದಾಗ ಇದನ್ನು ಖಂಡಿಸಿ ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆಗೊಳಪಡುವಂತೆ ಆಗ್ರಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ವಿಜಯೋತ್ಸವ ಅಲ್ಲ: ಸಮಾನ ಮನಸ್ಕರ ಒಗ್ಗೂಡುವಿಕೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು ಸರಕಾರ ಪ್ರಾಸಿಕ್ಯೂಶನ್‌ಗೆ ಒಪ್ಪಿಗೆ ನೀಡಿದ್ದು ಆರಂಭಿಕ ಹಂತದ ಯಶಸ್ಸು. ಆದರೆ ಇದು ವಿಜಯೋತ್ಸವ ಅಲ್ಲ. ನಾವಿಂದು ಯಾವ ಪರಿಸ್ಥಿತಿಯಲ್ಲಿ ನಮ್ಮ ಹಕ್ಕು, ನ್ಯಾಯ ಕೇಳಬೇಕಾಗಿದೆ ಎಂಬುದು ಈ ಹೋರಾಟದ ಮೂಲಕ ಅರಿತುಕೊಳ್ಳಬೇಕಿದೆ ಎಂದರು.

ಪತ್ರಕರ್ತ ರಾಜಾರಾಂ ತಲ್ಲೂರು ಮಾತನಾಡಿ, ಸತ್ಯದ ಹಾದಿಯಲ್ಲಿ ನಡೆಯುವಾಗ ಅನೇಕ ಅಡ್ಡಿ ಆತಂಕ ಗಳು ಸಹಜ. ಅದೆಲ್ಲಾ ನಿವಾರಿಸಿ, ಸುಳ್ಳಿನ ಸರಮಾಲೆಯನ್ನು ಬದಿಗೊತ್ತಿ ಸತ್ಯವನ್ನು ಎತ್ತಿ ಹಿಡಿಯಲು ಇಂತಹ ಸಂಘಟಿತ ಹೋರಾಟದಿಂದ ಸಾಧ್ಯ. ಗಾಂಧೀಜಿ ಹಾಕಿಕೊಟ್ಟ ಸತ್ಯದ ಹಾದಿಯಲ್ಲಿ 49 ದಿನಗಳ ಕಾಲ ಈ ಸತ್ಯಾಗ್ರಹ ನಡೆದಿತ್ತು ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಕ್ಕರೆ ಕಾರ್ಖಾನೆಯಲ್ಲಿ ಬೆಲ್ಲ ಮಾಡಲು ಹೊರಟಾಗಲೇ ಅವರ ಸಂಚನ್ನು ಅರಿಯಬೇಕಿತ್ತು. ಗುಜರಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿಗೈದಿದ್ದಾರೆ. ರೈತರ ಅನುಕೂಲಕ್ಕೆ ಸ್ಥಾಪಿಸಿದ ಸಂಸ್ಥೆಯಲ್ಲಿ ಇಂತಹ ಹಗರಣ ನಡೆದಾಗ ಅದರ ತನಿಖೆ ಹಿನ್ನೆಲೆ ಪ್ರಾಸಿಕ್ಯೂಶನ್ ಅನುಮತಿಗೆ 49 ದಿನಗಳ ಕಾಲ ನಡೆಸಿದ ಅವಿರತ ಹೋರಾಟಕ್ಕೆ ಫಲಿತಾಂಶ ಸಿಕ್ಕಿದೆ. ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆಯಾಗುವ ತನಕ ಈ ಹೋರಾಟದ ಬಿಸಿ ಇರಲಿದೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಕರಾವಳಿ ಭಾಗದ ರೈತರ ಡಿಎನ್‌ಎ ಅರ್ಥಮಾಡಿಕೊಂಡ ಜನಪ್ರತಿನಿಧಿ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಜನಪ್ರತಿನಿಧಿಯಾದವರು ಆ ಭಾಗದ ಜನರಿಗಾದ ಸಮಸ್ಯೆ, ಅನ್ಯಾಯಾದ ವಿರುದ್ಧ ಧ್ವನಿಯಾಗಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣದ ಅಭಿಯೋಜನೆ ಪೂರ್ವಾನುಮತಿ ವೇಳೆ ಸಾಕಷ್ಟು ಸವಾಲುಗಳು ಎದುರಾದವು. 48 ದಿನದ ಹೋರಾಟದ ಬಳಿಕ ಇದು ರೈತರಿಗೆ ಸಿಕ್ಕ ಜಯವಾಗಿದೆ ಎಂದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ, ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು, ದಲಿತ ಮುಖಂಡ ಮಂಜುನಾಥ ಗಿಳಿಯಾರ್, ಬಂಟರ ಸಂಘದ ಮುಖಂಡ ಸಂಜೀವ ಶೆಟ್ಟಿ ಸಂಪಿಗೇಡಿ, ಭಾರತೀಯ ಕಿಸಾನ್ ಸಂಘದ ಸೀತಾರಾಮ ಗಾಣಿಗ ಮೊದಲಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ 13 ವಲಯಗಳ ಅಧ್ಯಕ್ಷ ರೊಂದಿಗೆ ಪ್ರಮುಖರಾದ ಜಯಶೀಲ ಶೆಟ್ಟಿ, ಭೋಜು ಕುಲಾಲ್, ಅಶೋಕ್ ಶೆಟ್ಟಿ ಚೋರಾಡಿ, ಪ್ರದೀಪ್ ಬಲ್ಲಾಳ್ ಶಶಿಧರ ಶೆಟ್ಟಿ, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಎಸ್. ರಾಜು ಪೂಜಾರಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಎಂ.ಎ ಗಫೂರ್, ಗಣೇಶ್ ಕೊರಗ ಕುಂದಾಪುರ, ಸುಂದರ ಮಾಸ್ತರ್, ವಂಡಬಳ್ಳಿ ಜಯರಾಮ ಶೆಟ್ಟಿ, ಹಾರೂನ್ ಸಾಹೇಬ್, ಗೀತಾ ವಾಗ್ಳೆ, ವೆರೆನಿಕಾ ಕರ್ನೆಲಿಯೋ, ರೋಶನಿ ಒಲಿವೇರಾ, ದೇವಕಿ ಸಣ್ಣಯ್ಯ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಮಲ್ಯಾಡಿ ಶಿವರಾಮ ಶೆಟ್ಟಿ, ಎಂ. ಮಹೇಶ್ ಹೆಗ್ಡೆ, ವಿನೋದ್ ಕ್ರಾಸ್ಟೋ, ರಮೇಶ್ ಕಾಂಚನ್, ರೋಶನ್ ಕುಮಾರ್ ಶೆಟ್ಟಿ, ಸಂಪತ್ ಶೆಟ್ಟಿ ಮೊದಲಾದವರಿದ್ದರು.

ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿ, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ವಂದಿಸಿದರು.