ಅಪಘಾತದ ಬಾಗಿಲುಗಳಾಗುತ್ತಿವೆ ಕರಾವಳಿಯ ಹೆದ್ದಾರಿಗಳು: ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಬರೆದ ಬರಹ

ಕಳೆದ ವರುಷ ನಮ್ಮ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಹೇಳಿದ ಮಾತು ನೆನಪಾಗುತ್ತಿದೆ.”ನಮ್ಮ ದೇಶದಲ್ಲಿ ರಸ್ತೆಯ ಅಪಘಾತದಿಂದ ಆಗುವ ಸಾವು ನೇೂವುಗಳ ಅಂಕೆ ಸಂಖ್ಯೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಂತು ಮಾತನಾಡಲು ಮುಜುಗರವಾಗುವ ಪರಿಸ್ಥಿತಿ ಇದೆ “ಎಂದು ಸ್ವತ:ಸಚಿವರೆ ಆತ್ಮಾವಲೇೂಕನ ಮಾಡಿಕೊಂಡ ಹೇಳಿಕೆ ಪತ್ರಿಕೆಯಲ್ಲಿ ಓದಿದ ನೆನಪಿದೆ.

ಇದು ಎಲ್ಲರೂ ಎಲ್ಲಾ ಕಾಲದಲ್ಲೂ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಗಂಭೀರವಾದ ವಿಷಯವೂ ಹೌದು.ಹಾಗಾದರೆ ನಮ್ಮ ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಉಡುಪಿ ಮಂಗಳೂರು ವ್ಯಾಪ್ತಿಯ ಹೆದ್ದಾರಿಗಳು ಅತ್ಯಂತ ಅವೈಜ್ಞಾನಿಕ ಮಾತ್ರವಲ್ಲ ಹೆದ್ದಾರಿ ನಿರ್ಮಿಸುವಾಗ ಒಂದು ಸ್ವಲ್ಪವೂ ಕೂಡಾ ರಸ್ತೆಯ ಬದಿಯಲ್ಲಿ ತಿರುಗಾಡುವ ಧಾಟುವ ಜನಸಾಮಾನ್ಯರ ಬಗ್ಗೆಯಾಗಲಿ ಅವರ ಜೀವದ ಕುರಿತಾಗಲ್ಲಿ ಗಮನ ಹರಿಸದೇ ಇರುವುದನ್ನು ನೀವು ಪ್ರತ್ಯಕ್ಷ ಮಾತ್ರವಲ್ಲ ಜೀವಂತವಾಗಿಯೂ ಕಾಣಬಹುದು.

ಉದಾ: ಬೈಂದೂರಿನಿಂದ ಹಿಡಿದು ಮಂಗಳೂರಿನ ತನಕ ಅದೇ ಮಲ್ಪೆಯಿಂದ ಹಿಡಿದು ಆಗುಂಬೆಯ ತನಕ ಎಲ್ಲಿಯಾದರೂ ಪಾದಚಾರಿಗಳು ರಸ್ತೆ ಧಾಟಲು ಜಿಬ್ರಾ ಕ್ರಾಸ್‌ ಆಗಲಿ, ಸಿಗ್ನಲ್ ವ್ಯವಸ್ಥೆಯಾಗಲಿ, ಸುರಕ್ಷಿತವಾಗಿ ದಾಟಿ ಹೇೂಗಲು ಅಂಡರ್ ಪಾಸ್ ದಾರಿಯಾಗಲಿ, ಇದೆಯಾ..? ಇದ್ದರೆ ದಯವಿಟ್ಟು ತಿಳಿಸಿರಿ.ಇದರ ಅರ್ಥ ರಾಷ್ಟ್ರೀಯ ಹೆದ್ದಾರಿಗಳು ಇರುವುದು ವಾಹನಗಳು ಗಾಳಿ ವೇಗದಲ್ಲಿ ಓಡಲು ಬಿಟ್ಟರೆ ಜನಸಾಮಾನ್ಯರು ರಸ್ತೆಯ ಬದಿಗೆ ಬರಬಾರದು ಅನ್ನುವುದು ಹೆದ್ದಾರಿ ಇಲಾಖೆ ತಿಳಿದುಕೊಂಡ ಹಾಗೆ ಇದೆ. ನಮಗೆ ಫ್ಲೈ ಓವರ್ ಬೇಡ ಜನಸಾಮಾನ್ಯರಿಗೆ ತಮ್ಮ ಸೈಕಲ್‌ ನಲ್ಲಿಯಾಗಲಿ ನಡೆದು ಕೊಂಡು ಹೇೂಗುವ ವ್ಯವಸ್ಥೆಯನ್ನಾದರೂ ಮಾಡಬಹುದಿತ್ತು. ಕನಿಷ್ಠ ಪಕ್ಷ ಜನಸಂದಣಿ ಇರುವ ಸ್ಥಳಗಳಲ್ಲಿ ವೇಗದ ಮಿತಿಯನ್ನಾದರು ಗುರುತಿಸಬಹುದಿತ್ತು.ಅದನ್ನೂ ಮಾಡಿಲ್ಲ ಜನಸಾಮಾನ್ಯರು ತಮ್ಮ ಪ್ರಾಣ ಉಳಿಸಿಕೊಳ್ಳಬೇಕಾದರೆ ಎರಡು ಕಣ್ಣು ಸಾಲದು ನಾಲ್ಕು ಕಣ್ಣುಗಳನ್ನು ತೆರೆದು ರಸ್ತೆ ದಾಟ ಬೇಕಾದ ಭಯಾನಕ ಸ್ಥಿತಿ.

ನಾನು ದುಬೈ ಅಬುಧಾಬಿಯಲ್ಲಿ ಮೂರು ತಿಂಗಳು ಇದ್ದೆ..ಅಲ್ಲಿನ ಪ್ರಮುಖ ನಗರದ ಮಧ್ಯದಲ್ಲಿನ ಹೆದ್ದಾರಿಗಳಲ್ಲಿ ಅತೀ ವೇಗದಲ್ಲಿ ವಾಹನಗಳು ಚಲಿಸುತ್ತವೆ ಆದರೆ ಆಯ್ದ ಭಾಗಗಳಲ್ಲಿ ಜನಸಾಮಾನ್ಯರು ಸುಲಭವಾಗಿ ಹೆದ್ದಾರಿಧಾಟಿ ಹೇೂಗಲು ಅಂಡರ್‌ ಪಾಸ್ ದಾರಿಗಳಿವೆ. ಜಿಬ್ರಾ ಕ್ರಾಸ್ ಇದೆ ಸಿಗ್ನಲ್ 24×7 ಕೆಲಸ ನಿರ್ವಹಿಸುತ್ತದೆ.ಹಾಗಾಗಿ ಅಲ್ಲಿ ಪೊಲೀಸ್ ವ್ಯವಸ್ಥೆ ಇಲ್ಲದೇನೆ ಸಂಪೂರ್ಣವಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಒಳ ಪಟ್ಟಿದೆ.ನಮ್ಮಲ್ಲಿ ಕಲ್ಸಂಕದಂತಹ ವಾಹನ ದಟ್ಟಣೆ ಇರುವಲ್ಲಿ ಇಬ್ಬರು ಮೂವರು ಪೊಲೀಸ್ ಇರುತ್ತಾರೆ ಅವರ ಕೆಲಸವೆಂದರೆ ರಸ್ತೆಯ ಬ್ಲಾಕ್ ಆಗದ ಹಾಗೆ ನೇೂಡುವುದು ಬಿಟ್ಟರೆ ಅಪಘಾತ ವಾಗದ ಹಾಗೆ ನೇೂಡುವುದಲ್ಲ ಅನ್ನುವುದು ಸ್ವಷ್ಟ.ಅದೇ ಮಣಿಪಾಲ್ ಎಂಜಿಎಂ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ರೂಲ್ಸ್‌ ಬ್ರೇಕ್ ಮಾಡಿ ವಾಹನಗಳು ತಿರುಗಾಡುವುದು ಮಾಮೂಲು.ಅಂದರೆ ನಮ್ಮಲ್ಲಿ ಟ್ರಾಫಿಕ್ ನಿಯಮ ಮುರಿಯುವುದರಲ್ಲಿ ವಾಹನ ಚಾಲಕರು ನಿಷ್ಣಾತರು ಅಂದರೆ ತಕ್ಕ ಶಿಕ್ಷೆ ಕೊಡುವ ವ್ಯವಸ್ಥೆ ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಇಲ್ಲ.

ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಅತ್ಯಂತ ಅವೈಜ್ಞಾನಿಕ ಮತ್ತು ದುರಂತ ಮಯವಾಗಿ ಮೂಡಿ ಬರಲು ಪ್ರಮುಖ ಕಾರಣವೆಂದರೆ ನಮ್ಮ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬೈಂದುಾರಿನಿಂದ ಮಂಗಳೂರಿನ ಕೊನೆಯ ತನಕ ಮಲ್ಪೆ ಯಿಂದ ಆಗುಂಬೆಯ ಪ್ರಮುಖ ನಗರಗಳ ಹೃದಯ ಭಾಗವನ್ನೆ ಸೀಳಿಕೊಂಡು ಹೇೂಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದೇವೆ.

ಉದಾ:ಕುಂದಾಪುರ, ಕೇೂಟ, ಬ್ರಹ್ಮಾವರ, ಸಂತೆಕಟ್ಟೆ ..ಹೀಗೆ ಮುಂದುವರಿಯುತ್ತದೆ ಅದೇ ಮಲ್ಪೆಯಿಂದ ಶುರುವಾಗಿ ಉಡುಪಿ ಹೃದಯ ಭಾಗ ಮಣಿಪಾಲ್ ಹೀಗೆ ಮುಂದುವರಿಯುತ್ತದೆ.ಸ್ವಾತಂತ್ರ್ಯ ಪೂರ್ವದಲ್ಲಿ ಜನ ನಡೆದಾಡುತ್ತಿದ್ದ ಕಾಲು ದಾರಿಗಳನ್ನೆ ರಸ್ತೆಮಾಡಿ ಅನಂತರ ಅದನ್ನು ರಾಜ್ಯ ಹೆದ್ದಾರಿ ಮಾಡಿ ಈಗ ಅದನ್ನೆ ರಾಷ್ಟ್ರೀಯ ಹೆದ್ದಾರಿಗಳಾಗಿ ವಿಸ್ತರಣೆ ಮಾಡಿ ಚತುಸ್ಪದ ರಸ್ತೆಗಳಾಗಿ ಪರಿವರ್ತನೆ ಮಾಡಿದ್ದೇವೆ.ಈ ಎಲ್ಲಾ ಹೆದ್ದಾರಿಗಳು ನಗರದ ಹೊರ ಭಾಗದಲ್ಲಿ ನಿರ್ಮಾಣ ಮಾಡಿದ್ದರೆ ಇಂದಿನ ಈ ದು:ಸ್ಥಿತಿ ಬರುತ್ತಿರಲಿಲ್ಲ.ನಮ್ಮ ವ್ಯಾಪಾರಕ್ಕೆ ವ್ಯವಹಾರಕ್ಕೆ ತೊಂದರೆಯಾಗ ಬಹುದು ಅನ್ನುವ ಕಾರಣಕ್ಕಾಗಿಯೇ ಉತ್ತರದಿಂದ ದಕ್ಷಿಣ ಮತ್ತು ಪೂರ್ವದಿಂದ ಪಶ್ಚಿಮ ದಿಕ್ಕಿನಲ್ಲಿ ಓಡುವ ರಾಷ್ಟ್ರೀಯ ಹೆದ್ದಾರಿಗಳನ್ನು ಮೈಮೇಲೆ ಹೊದ್ದುಕೊಂಡು ಮಲಗಿದ್ದೇವೆ. ಹಾಗಾಗಿಯೇ ಇರಬೇಕು ರಾತ್ರಿಯಲ್ಲಿ ಮಲಗಿದ್ದರು ನಿದ್ರೆ ಬಾರದ ಸ್ಥಿತಿಯಲ್ಲಿ ಕರಾವಳಿಯ ಮಂದಿ ಮಲಗುವ ಪರಿಸ್ಥಿತಿ ಬಂದಿದೆ.

ಸ್ಮಾರ್ಟ್ ಸಿಟಿ ಕಲ್ಪನೆಯಂತೂ ಕನಸಿನಲ್ಲೂ ಕಾಣದ ಪರಿಸ್ಥಿತಿಗೆ ಬಂದಿದೆ.ಅದಕ್ಕೆ ಮುಖ್ಯಕಾರಣ ಅವೈಜ್ಞಾನಿಕ ರಸ್ತೆಯ ಕಾಮಗಾರಿ ಪರಿಸ್ಥಿತಿ ಎಷ್ಟು ತಮಾಷೆಯಾಗಿದೆ ಅಂದರೆ ಮೊದಲು ಮಾಡಬೇಕಾದದ್ದನ್ನು ಕೊನೆಗೆ ಮಾಡುವುದು. ಕೊನೆಗೆ ಮಾಡಬೇಕಾದ್ದನ್ನು ಮೊದಲು ಮಾಡುವುದು.ಇದು ನಮ್ಮ ರಕ್ತಗತವಾದ ಕಾರ್ಯ ವೈಖರಿ.ರಸ್ತೆ ಮೊದಲು ಮಾಡಿ ಕಾಂಕ್ರೀಟ್ ಹಾಕಿ ಒಣಗಿತು ಅನ್ನುವಾಗ ಡ್ರೆನೇಜ್ ಚರಂಡಿ ವಿದ್ಯುತ್ ಕಂಬ ಇದರ ಜೊತೆಗೆ ಜಾಹಿರಾತು ಫಲಕದ ಕಂಬ ಬರುವುದಂತೂ ಗ್ಯಾರಂಟಿ.ಅಂತೂ ಕೊನೆಗೂ ಎಲ್ಲಾ ಕಂಬ ಬಿದ್ದು ಹೇೂದರು ಪರವಾಗಿಲ್ಲ ..ಜಾಹಿರಾತು ಕಂಬ ಮಾತ್ರ ಗಟ್ಟಿಯಾಗಿ ನಿಲ್ಲಬೇಕು .ಯಾಕೆಂದರೆ ಇದು ಮಾತ್ರ ಸ್ಥಳೀಯ ಆಡಳಿತಕ್ಕೆ ಲಾಭ ತರುವ ಗ್ಯಾರಂಟಿ ಕಂಬಗಳು..ಇದು ನಮ್ಮ ಸ್ಮಾರ್ಟ್ ಸಿಟಿ ರೂಪಿಸುವ ಪರಿಕಲ್ಪನೆ..ಏನೇ ಆಗಲಿ ನಮ್ಮ ಕಣ್ಮನ ಸೆಳೆಯುವ ರಾಷ್ಟ್ರೀಯ ಹೆದ್ದಾರಿಗಳು ನಮ್ಮ ದಿನ ನಿತ್ಯದ ಅಪಘಾತಗಳಿಗೆ ಹೆಬ್ಬಾಗಿಲಾಗಿ ನಿಂತಿವೆ ಅನ್ನುವುದು ಅಷ್ಟೇ ಸತ್ಯ.

ಬರಹ: ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.