ಮೋಟಾರು ವಾಹನ‌ ಕಾಯ್ದೆ ಮೂಲಕ ಜನಸಾಮಾನ್ಯರ ಮೇಲೆ ಕೇಂದ್ರ ಸರಕಾರ ಯುದ್ದ: ಯು.ಟಿ. ಖಾದರ್

ಮಂಗಳೂರು: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡ ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಯುದ್ಧ ನಡೆಸುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.
ಮಂಗಳೂರಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದು ಹದ್ದುಬಸ್ತಿನಲ್ಲಿಟ್ಟು , ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡುವ ಭಾವನೆ ಇತ್ತು. ಆದರೆ ಸರಕಾರ ಆ ಕಾರ್ಯ ಮಾಡದೆ ಮೋಟಾರು ವಾಹನ ಕಾಯ್ದೆಯಡಿ ಭಾರೀ ತಂಡವನ್ನು ಹೇರುವ ಈಗಾಗಲೇ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೆ ಒಳಗಾಗಿರುವ  ಜನಸಾಮಾನ್ಯರ ಮೇಲೆಯೇ ಯುದ್ಧ ನಡೆಸುತ್ತಿದೆ ಎಂದರು.
ನಿರ್ಗಮಿತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ಹೋಗಲಿ, ದೇಶದ್ರೋಹಿ, ನಕ್ಸಲೈಟ್ ಎಂದು ಕರೆಯುವ ಮೂಲಕ ಅವರ ಮಾತುಗಳನ್ನು ಬಿಜೆಪಿಯ ನಾಯಕರು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಸಾಕ್ಷಿ ಸಹಿತ ಸಾಬೀತು ಪಡಿಸುತ್ತಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ವಿರುದ್ಧ ಕೂಡ ಕಿಡಿಕಾರಿದರು.
ಮಾಜಿ ಸಚಿವ ಡಿಕೆಶಿ ಅವರನ್ನು ಈಡಿ ಇಲಾಖೆ ವಶಕ್ಕೆ ಪಡೆದಿರುವ ಕುರಿತಂತೆ‌ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಬಂಧನಕ್ಕೆ ಸಿದ್ಧರಾಮಯ್ಯ ಕಾರಣ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಅವರನ್ನು ಈಗಾಗಲೇ ಜೋಕರ್ ಎಂದು ಕರೆಯಲಾಗುತ್ತಿದೆ. ಜಿಲ್ಲೆಯವರೂ ಜೋಕರ್ ಎಂದು ಕರೆಯುವಂತಾಗಬಾರದು. ಅವರು ತಮ್ಮ ಘನತೆಯನ್ನ ಕಾಪಾಡಿಕೊಳ್ಳಬೇಕು ಎಂದು ಖಾದರ್ ಹೇಳಿದರು.