ವುಹಾಂಗ್: ಚೀನಾದ ವೈದ್ಯರು ಹಲವು ಯಶಸ್ವಿ ಪ್ರಯೋಗ ಮಾಡುವಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಅಂತಹ ಇನ್ನೊಂದು ಐತಿಹಾಸಿಕ ಅದ್ಬುತವೊಂದನ್ನು ಈಗ ಮತ್ತೆ ಸಾಧಿಸಿದ್ದಾರೆ ಅದೆಂದರೆ ಮಾನವನ ದೇಹಕ್ಕೆ ಮೊದಲ ಬಾರಿಗೆ ಜೀನ್-ಸಂಪಾದಿತ ಹಂದಿಯ ಯಕೃತ್ತನ್ನು (Pig Liver) ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾದದ್ದು
ಹೌದು. ಚೀನಾ ವೈದ್ಯರ ಈ ಪ್ರಯೋಜ ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲೊಂದು ಎಂದು ಬಿಂಬಿಸಲಾಗುತ್ತಿದೆ.
ಈ ಕಸಿ ಮೂಲಕ ಭವಿಷ್ಯದಲ್ಲಿ ಅಂಗಗಳ ದೊಡ್ಡ ಕೊರತೆಯನ್ನು ನೀಗಿಸಲು ಹಂದಿಯ ಅಂಗಗಳನ್ನು ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.
ಅಂದ ಹಾಗೆ, ಕಳೆದ ವರ್ಷ ಚೀನಾದ ಆಸ್ಪತ್ರೆಯೊಂದರಲ್ಲಿ ಅಲ್ಲಿನ ವೈದ್ಯರು ಮೆದುಳು ನಿಷ್ಕ್ರಿಯಗೊಂಡ ರೋಗಿಗೆ ಈ ಕಸಿ ನಡೆಸಿದರು. ಹಂದಿಯ ಲಿವರ್ ಮಾನವ ದೇಹದಲ್ಲಿ 10 ದಿನಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಲೇ ಇರುವುದನ್ನು ವೈದ್ಯರು ಕಂಡುಕೊಂಡ್ರು. ಈ ಸಮಯದಲ್ಲಿ, ಯಕೃತ್ತಿಗೆ ರಕ್ತದ ಹರಿವು ಸಾಮಾನ್ಯವಾಗಿತ್ತು ಮತ್ತು ದೇಹದಲ್ಲಿ ಉರಿಯೂತ ಅಥವಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ ಈ ಪ್ರಯೋಗ ಯಶಸ್ವಿಯಾಗಿ ಎಲ್ಲೆಡೆ ಸುದ್ದಿಯಾಯಿತು. ವೈದ್ಯಲೋಕದ ಒಂದು ಅಚ್ಚರಿಯೂ ಆಯಿತು.
ಪ್ರಪಂಚದಾದ್ಯಂತ ಅಂಗಾಂಗಗಳ ಕೊರತೆಯನ್ನು ಅಮೇರಿಕಾ ಸೇರಿದಂತೆ ಪ್ರತೀ ದೇಶವೂ ಅನುಭವಿಸುತ್ತಿದೆ. ಇದೊಂದು ದೊಡ್ಡ ಸಮಸ್ಯೆಯೇ ಆಗಿದೆ. ಅಮೆರಿಕದಲ್ಲಂತೂ 1 ಲಕ್ಷಕ್ಕೂ ಹೆಚ್ಚು ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಹಂದಿಯ ಅಂಗಗಳು ಮಾನವ ಅಂಗಗಳಿಗೆ ಹೋಲುವುದರಿಂದ, ವಿಜ್ಞಾನಿಗಳು ಹಂದಿಯ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ಕಡೆಗೆ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದರು.
ಮೂತ್ರ ಪಿಂಡಗಳ ನಂತರ ಯಕೃತ್ ಕಸಿ:
ಈ ಹಿಂದೆ ಹಂದಿಯ ಮೂತ್ರಪಿಂಡಗಳು ಮತ್ತು ಮನುಷ್ಯರಿಗೆ ಕಸಿ ಮಾಡಲಾಗಿತ್ತು. ಆದರೆ ಈಗ ಚೀನಿ ವೈದ್ಯರು ಮಾಡಿದ ಯಕೃತ್ತು ಕಸಿ ಹೆಚ್ಚು ಸವಾಳಿನದ್ದು. ಇದು ಸಂಕೀರ್ಣವೂ ಹೌದು, ಏಕೆಂದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ, ಹಾನಿಕಾರಕ ಅಂಶಗಳನ್ನು ತೆಗೆದುಹಾಕುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಇತರ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಹೀಗಿರುವಾಗ ಇಂತಹ ಸಾಹಸವೊಂದನ್ನು ವೈದ್ಯಲೋಕ ಕಂಡುಕೊಂಡಿದ್ದು ನಿಜಕ್ಕೂ ಅಚ್ಚರಿ ಮತ್ತು ಶ್ಲಾಘನೀಯ ಕಾರ್ಯ ಅಲ್ಲವೇ!












