ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ; ತಪ್ಪಿತಸ್ಥರ ವಿರುದ್ಧ, ಕೃತ್ಯವನ್ನು ಸಮರ್ಥಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣದ ಎಲ್ಲ ತಪ್ಪಿತಸ್ಥರ ವಿರುದ್ಧ ಹಾಗೂ ಈ ಹೇಯ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರು, ಮಲ್ಪೆ ಬಂದರು ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಮೇಲೆ ಮೀನು ಹೊರುವ ಕಾಯಕದಲ್ಲಿ ನಿರತರಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿ ಥಳಿಸಿರುವುದು ಅತ್ಯಂತ ಹೇಯ ಕೃತ್ಯ. ಇದನ್ನು ನಮ್ಮ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಸಂತ್ರಸ್ತೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಅವರ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Oplus_131072

ಮೀನುಗಾರರ ಸಂಘ ಆಯೋಜಿಸಿದ ಸಭೆಯಲ್ಲಿ ಎಸ್ಪಿ ವಿರುದ್ಧ ಮಾತನಾಡಿರುವ ಭಾಷೆ ಪ್ರತಿಯೊಬ್ಬರನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ಹೇಯ ಕೃತ್ಯವನ್ನು ಸಮರ್ಥಿಸಿದ ರೀತಿ ನೋಡಿದರೆ ಅದು ಪರಿಶಿಷ್ಟರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಪರೋಕ್ಷ ಎಚ್ಚರಿಕೆ ಆಗಿದೆ. ಇದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಆತಂಕ ಉಂಟು ಮಾಡಿದೆ ಎಂದರು.

ಪರಿಶಿಷ್ಟ ಜಾತಿಯ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ, ಅವರ ಮೇಲೆ ಸಾರ್ವಜನಿಕವಾಗಿ ಅವಮಾನ ಮಾಡಿ ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಬೇಕು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತಪ್ಪ, ಸದಾಶಿವ ಸಾಲಿಯಾನ್, ಸರೋಜಿನಿ ಬಂಟ್ವಾಳ, ರಘು ಎಕ್ಕಾರ್, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು, ಪದ್ಮನಾಭ ಉಪಸ್ಥಿತರಿದ್ದರು.