ಹೆಜಮಾಡಿ: ಮೊದಲು ಸಾರ್ವಜನಿಕರಿಗೆ ನೋ ಅಡ್ಮಿಷನ್ ಬೋರ್ಡ್ ಹಾಕಿಕೊಳ್ಳುತ್ತಿದ್ದ ಅಂಚೆ ಕಚೇರಿಗಳು ಬದಲಾಗುತ್ತಿರುವ ಇಂದಿನ ಸನ್ನಿವೇಶಗಳಲ್ಲಿ ಜನ ಸ್ನೇಹಿಯಾಗಿ ಗ್ರಾಹಕರನ್ನು ಸುಸ್ವಾಗತಿಸಿ ಉತ್ತಮ ಸೇವೆಯನ್ನು ನೀಡುತ್ತಿವೆ ಎಂದು ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ರವರು 22 ಮಾರ್ಚ್ 2025 ಶನಿವಾರ ಹೆಜಮಾಡಿ ಯಲ್ಲಿ ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು ಧ್ಯೇಯದ ಅಂಚೆ ಜನ ಸಂಪರ್ಕ ಅಭಿಯಾನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತ ಮಾತನಾಡಿದರು.
ಸುಮಾರು ಮುವತ್ನಾಲ್ಕು ವರ್ಷಗಳ ಹಿಂದೆ ತನ್ನ ಅಂಚೆ ವೃತ್ತಿ ಜೀವನಕ್ಕೆ ಅಂಚೆ ಸಹಾಯಕನಾಗಿ ನಾಂದಿ ಹಾಡಿದ ಹೆಜಮಾಡಿಯಲ್ಲಿ ಅಂಚೆ ಅಭಿಯಾನವನ್ನು ಆಯೋಜಿಸುವ ಮೂಲಕ ಗ್ರಾಮಸ್ಥರಿಗೆ ಅಂಚೆ ಸೌಲಭ್ಯ ತಲಪಿಸಲು ತನಗೆ ಅತೀವ ಹರ್ಷ ಆಗುತ್ತಿದೆ ಎಂದು ಅಭಿಯಾನದ ರೂವಾರಿ ಮಾಜಿ ಸೈನಿಕ ಹಾಗು ಪ್ರಸ್ತುತ ಉಡುಪಿ ದಕ್ಷಿಣ ಉಪ ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಭಾವುಕರಾಗಿ ನುಡಿದರು.
ಕಾರ್ಯಕ್ರಮವನ್ನು ಹಲವಾರು ಪ್ರಶಸ್ತಿ ಪುರಸ್ಕೃತ ಕರಾವಳಿ ಯುವಕ-ಯುವತಿ ವೃಂದದ ಸಹಯೋಗದಲ್ಲಿ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ನೂರಾರು ಗ್ರಾಮಸ್ಥರು ಈ ಅಭಿಯಾನದಲ್ಲಿ ಆಧಾರ್-ಹೊಸ ನೊಂದಣಿ/ಪರಿಷ್ಕರಣೆ ಹಾಗೂ ಆದಿತ್ಯ ಬಿರ್ಲಾ ಅಪಘಾತ ವಿಮೆ ನೊಂದಣಿ ಮತ್ತು ಇತರ ಎಲ್ಲಾ ಅಂಚೆ ಸೌಲಭ್ಯಗಳ ಪ್ರಯೋಜನವನ್ನು ಪಡೆದರು. ಪ್ರಾಯೋಜಕರು ಮತ್ತು ಹೆಜಮಾಡಿ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಉಡುಪಿ ಅಂಚೆ ವಿಭಾಗದ ವತಿಯಿಂದ ಧನ್ಯವಾದ ಪತ್ರ ವಿತರಿಸಲಾಯಿತು.












